ಮೆಕ್ಸಿಕೋ : 153 ಕೈದಿಗಳ ಪರಾರಿಗೆ 41 ರಕ್ಷಣಾ ಸಿಬ್ಬಂದಿಗಳ ನೆರವು!
ಮೆಕ್ಸಿಕೋ ನಗರ, ಬುಧವಾರ, 29 ಡಿಸೆಂಬರ್ 2010( 19:58 IST )
ಉತ್ತರ ಮೆಕ್ಸಿಕೋ ಗಡಿಭಾಗದಲ್ಲಿನ ನಗರದಲ್ಲಿನ ಜೈಲಿನಿಂದ 153 ಮಂದಿ ಕೈದಿಗಳು ಪರಾರಿಯಾಗಲು ಸುಮಾರು 40ಕ್ಕೂ ಅಧಿಕ ಮಂದಿ ಬಂಧಿಖಾನೆ ಗಾರ್ಡ್ಸ್‌ಗಳೇ ನೆರವು ನೀಡಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.
ಗಡಿಭಾಗದಲ್ಲಿನ ನೌವೋ ಲಾರೆಡೋ ಜೈಲಿನ ಪ್ರಮುಖ ದ್ವಾರವನ್ನೇ ಸುಮಾರು 41 ಗಾರ್ಡ್ಸ್‌ಗಳೇ ತೆರೆದು, ಕೈದಿಗಳು ಪರಾರಿಯಾಗಲು ಅನುಕೂಲ ಕಲ್ಪಿಸಿಕೊಟ್ಟಿರುವುದಾಗಿ ಫೆಡರಲ್ ಅಟಾರ್ನಿ ಜನರಲ್ ಕಚೇರಿಯ ಪ್ರಕಟಣೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಾರ್ಡ್ಸ್‌ಗಳ ಮೇಲಿನ ಆರೋಪ ಸಾಬೀತಾದಲ್ಲಿ ಸುಮಾರು 20 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಸುಮಾರು 141 ಕೈದಿಗಳು ಡಿಸೆಂಬರ್ 17ರಂದು ಪರಾರಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದರು. ತದನಂತರ ಪರಾರಿಯಾಗಿರುವ ಕೈದಿಗಳ ಸಂಖ್ಯೆ 153 ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
ದರೋಡೆ, ಮಾದಕ ದ್ರವ್ಯ ಸಾಗಾಟದ ಆರೋಪದ ಮೇಲೆ ಆ ಕೈದಿಗಳನ್ನು ಬಂಧಿಸಲಾಗಿತ್ತು. ಇದೀಗ ತಪ್ಪಿಸಿಕೊಂಡ ಕೈದಿಗಳ ಸೆರೆಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಮೆಕ್ಸಿಕೋ ಅಧಿಕಾರಿಗಳು ತಿಳಿಸಿದ್ದಾರೆ.