ಇರಾನ್ ಈಗ ನ್ಯೂಕ್ಲಿಯರ್ ದೇಶವಾಗಿರುವುದಾಗಿ ಅಧ್ಯಕ್ಷ ಮಹಮೂದ್ ಅಹಮದಿನೆಜಾದ್ ಅಧಿಕೃತವಾಗಿ ಘೋಷಿಸಿದ್ದು, ಪರಮಾಣು ಇಂಧನ ಕಾರ್ಯದಲ್ಲೂ ಯಶಸ್ಸು ಸಾಧಿಸಿರುವುದಾಗಿ ತಿಳಿಸಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.
ಇರಾನ್ ನ್ಯೂಕ್ಲಿಯರ್ ಪ್ರೋಗ್ಲಾಂ ವಿರುದ್ಧ ಅಮೆರಿಕ ಮತ್ತು ಬೆಂಬಲಿತ ದೇಶಗಳು ರಾಜಕೀಯ ಒತ್ತಡ ಹೇರಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಇರಾನ್ ನ್ಯೂಕ್ಲಿಯರ್ ದೇಶವಾಗಿದೆ ಎಂದು ಅಹಮದಿನೆಜಾದ್ ಹೇಳಿಕೆ ಉಲ್ಲೇಖಿಸಿ ಪ್ರೆಸ್ ಟಿವಿ ವಿವರಿಸಿದೆ.
ಇರಾನ್ ನ್ಯೂಕ್ಲಿಯರ್ ಎನರ್ಜಿ ಪ್ರೋಗ್ಲಾಂಗೆ ಸಂಬಂಧಿಸಿದಂತೆ ಪರಸ್ಪರ ಮಾತುಕತೆ ಮೂಲಕ ಮಾತ್ರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಉತ್ತರ ಕಾರಾಜ್ ನಗರದಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ನಮ್ಮ ಮೂಲಭೂತ ಹಕ್ಕಿನ ಆಧಾರದ ಮೇಲೆ ಸಹಕಾರ ನೀಡಲು ಸಿದ್ದ. ಆದರೆ ಇರಾನ್ ಹಕ್ಕಿನ ಸಾಧನೆ ವಿರುದ್ಧ ಪಾಶ್ಚಾತ್ಯ ದೇಶಗಳು ಮೂಗು ತೂರಿಸಿದರೆ ಹುಷಾರ್ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.