ಅಥೆನ್ಸ್ ನ್ಯಾಯಾಲಯದ ಹೊರಭಾಗದಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಕಟ್ಟಡ ಹಾನಿಗೊಂಡಿದೆ. ಆದರೆ ಸ್ಫೋಟದ ಬಗ್ಗೆ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅಂಗವಾಗಿ ಕೋರ್ಟ್‌ನಲ್ಲಿದ್ದ ಜನರನ್ನು ಹೊರಕಳುಹಿಸಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಕೋರ್ಟ್ ಕಾಂಪ್ಲೆಕ್ಸ್ ಸಮೀಪ ಬಾಂಬ್ ಸ್ಫೋಟಿಸಿದ್ದರಿಂದ ಸುತ್ತಲೂ ಹೊಗೆಯಿಂದ ಆವರಿಸಿಕೊಂಡಿರುವುದನ್ನು ಚಾನೆಲ್‌ಗಳು ಪ್ರಸಾರ ಮಾಡಿದ್ದವು. ಕಟ್ಟಡದ ಕಿಟಕಿಗಳು ಧ್ವಂಸಗೊಂಡಿದ್ದು, ಕೆಲವು ವಾಹನಗಳೂ ಕೂಡ ಹಾನಿಗೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಈ ಘಟನೆಗೂ ಮುನ್ನ ಕದ್ದೊಯ್ದಿರುವ ಮೋಟಾರ್ ಬೈಕ್‌ವೊಂದರಲ್ಲಿ ಟೈಮ್ ಬಾಂಬ್ ಅಳವಡಿಸಿರುವ ಸಾಧ್ಯತೆ ಇರುವುದಾಗಿ ಪೊಲೀಸರಿಗೆ ಮಾಹಿತಿಯೊಂದು ಲಭಿಸಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕೋರ್ಟ್‌ನಲ್ಲಿದ್ದ ಜನರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿತ್ತು.
ಆದರೂ ಇದು ಪ್ರಬಲ ಸ್ಫೋಟವಾಗಿತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ.