ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಸಂಚನ್ನು ಉಗ್ರರ ಅಡಗುತಾಣದಲ್ಲಿಯೇ ರೂಪಿಸಲಾಗಿದೆ ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಸ್ಪಷ್ಟನೆ ನೀಡಿದ್ದು, 2007ರಲ್ಲಿ ಭುಟ್ಟೋ ಹತ್ಯೆ ಸಂಚನ್ನು ಬ್ರಿಗೇಡಿಯರ್ ಮನೆಯಲ್ಲಿ ನಡೆಸಲಾಗಿತ್ತು ಎಂಬ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.
ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸೆಂಟ್ರಲ್ ಎಕ್ಸಿಕ್ಯೂಟಿವ್ ಸಮಿತಿಗೆ ನೀಡುವವರೆಗೆ ಪಾಕಿಸ್ತಾನದ ಮಾಧ್ಯಮಗಳು ಇಂತಹ ಕಪೋಲಕಲ್ಪಿತ ವರದಿ ಮಾಡಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ರ್ಯೂನ್ ವರದಿ ಮಾಡಿದೆ.
ಭುಟ್ಟೋ ಹತ್ಯೆ ಸಂಚನ್ನು ಬ್ರಿಗೇಡಿಯರ್ ಮನೆಯಲ್ಲೇ ರೂಪಿಸಲಾಗಿರುವ ಅಂಶ ಹೊಸ ತನಿಖೆಯಲ್ಲಿ ಬಹಿರಂಗವಾಗಿದ್ದು, ಆ ನಿಟ್ಟಿನಲ್ಲಿ ಬ್ರಿಗೇಡಿಯರ್ ಸೇರಿದಂತೆ ಒಂಬತ್ತು ಮಂದಿಯ ಜಾಡು ಪತ್ತೆ ಹಚ್ಚಲಾಗಿದೆ ಎಂದು ವರದಿ ಪ್ರಕಟವಾಗಿದ್ದಕ್ಕೆ ಮಲಿಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು 2007ರ ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಸಾರ್ವಜನಿಕ ಚುನಾವಣಾ ಭಾಷಣ ಮಾಡಿ ಹೊರಡುತ್ತಿದ್ದ ವೇಳೆಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಗನ್ ದಾಳಿಯಲ್ಲಿ ಹತ್ಯೆಗೈಯಲಾಗಿತ್ತು.