ಇಸ್ಲಾಮಿಕ್, ತಮಿಳು ಮತ್ತು ಸಿಖ್ ಉಗ್ರಗಾಮಿ ಸಂಘಟನೆಗಳು ಶಾಲೆ ಮತ್ತು ಯೂನಿರ್ವಸಿಟಿಗಳಲ್ಲಿರುವ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಎದುರು ನೋಡುತ್ತಿರುವುದಾಗಿ ಆರೋಪಿಸಿರುವ ಮಲೇಷ್ಯಾ, ಉಗ್ರಗಾಮಿ ಸಂಘಟನೆಗಳ ಇಂತಹ ಕೃತ್ಯ ಕೈಗೂಡದಂತೆ ಮಾಡಲು ಗುಪ್ತಚರ ಇಲಾಖೆ ಹದ್ದಿನಗಣ್ಣು ನೆಟ್ಟಿರುವುದಾಗಿ ಹೇಳಿದೆ.
ದೇಶದಲ್ಲಿ ಇಸ್ಲಾಮಿಸ್ಟ್ ಉಗ್ರಗಾಮಿಗಳು ಮತ್ತು ತಮಿಳು ಮತ್ತು ಸಿಖ್ ಪ್ರತ್ಯೇಕತವಾದಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ದೇಶದಲ್ಲಿನ ವಿದ್ಯಾರ್ಥಿಗಳ ಮೇಲೆ ಉಗ್ರರ ಸಿದ್ದಾಂತ ಹೆಚ್ಚು ಪ್ರಭಾವ ಬೀರದಂತೆ ತಡೆಯಬೇಕಾಗಿದೆ ಎಂದು ಮಲೇಷ್ಯಾ ಗೃಹ ಸಚಿವ ಹಿಶಾಮುದ್ದೀನ್ ಹುಸೈನ್ ತಿಳಿಸಿದ್ದಾರೆ.
ಆದರೆ ಇದೊಂದು ಶೀಘ್ರ ಬೆಳವಣಿಗೆಯ ಬೆದರಿಕೆಯಲ್ಲ. ದೇಶದಲ್ಲಿನ ಭಯೋತ್ಪಾದಕ ಕೃತ್ಯ ನಡೆಯದಂತೆ ಹೆಚ್ಚು ನಿಗಾ ವಹಿಸಲಾಗಿದೆ. ಪರಿಸ್ಥಿತಿ ಕೂಡ ನಮ್ಮ ಹಿಡಿತದಲ್ಲಿಯೇ ಇದೆ. ಆದರೂ ಇಂತಹ ಚಟುವಟಿಕೆಗಳು ನಡೆಯದಂತೆ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಉಗ್ರಗಾಮಿ ಸಂಘಟನೆಗಳು, ಸಿಖ್, ತಮಿಳು ಪ್ರತ್ಯೇಕತವಾದಿಗಳು ಶಾಲೆ ಮತ್ತು ಯೂನಿರ್ವಸಿಟಿ ವಿದ್ಯಾರ್ಥಿಗಳತ್ತ ದೃಷ್ಟಿ ನೆಟ್ಟಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಆ ಹಿನ್ನೆಲೆಯಲ್ಲಿ ದೇಶದಲ್ಲಿ ಇಂತಹ ಚಟುವಟಿಕೆ ನಡೆಯದಂತೆ ತಡೆಯಲು ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.