ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಅಂಗರಕ್ಷಕನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆಗೆ ಪಾಕಿಸ್ತಾನದ ಬಲಪಂಥೀಯ ಪಕ್ಷಗಳು ಸಂಭ್ರಮಾಚರಣೆ ನೆರವೇರಿಸಿದ ಘಟನೆ ನಡೆದಿದೆ.
ಮೃತ ಗವರ್ನರ್ ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಕೆಲವು ನಗರಗಳಲ್ಲಿ ಸಂಭ್ರಮಾಚರಣೆ ನಡೆಸಿದ ಹಲವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಗವರ್ನರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಆದರೆ ಧಾರ್ಮಿಕ ಮುಖಂಡರು, ಗವರ್ನರ್ ಅಂತ್ಯಕ್ರಿಯೆ ವಿಧಿಯನ್ನು ದೇಶಾದ್ಯಂತ ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಅಷ್ಟೇ ಅಲ್ಲ ಗವರ್ನರ್ ಹತ್ಯೆಯ ಸಂಭ್ರಮಾಚರಣೆಯನ್ನು 40 ದಿನಗಳ ಕಾಲ ಆಚರಿಸಬೇಕೆಂದು ಸಲಹೆ ಕೂಡ ನೀಡಿದ್ದರು!
ಅಲ್ಲದೇ ಧಾರ್ಮಿಕ ನಿಂದನೆ ಕಾಯ್ದೆಯನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖಂಡರು ಅಂಧ ಕಾನೂನು ಎಂದು ಉಲ್ಲೇಖಿಸಿರುವುದನ್ನು ದಿಯೋಬಂದ್ ಮತ್ತು ಬಾರೆಲ್ವಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಪ್ರೀತಿಸುವವರು ಯಾರೂ ಈ ಕಾಯ್ದೆಯ ವಿರುದ್ಧ ಮಾತನಾಡಲಾರರು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ತಮ್ಮ ಆಡಳಿತ ಹೊಂದಿರುವ ಶಾಲೆಗಳಲ್ಲಿ, ಯಾವ ಮುಸ್ಲಿಮನೂ ಗನರ್ನರ್ ಅಂತ್ಯಕ್ರಿಯೆ ವಿಧಿಯಲ್ಲಿ ಪಾಲ್ಗೊಳ್ಳಬಾರದು, ಪ್ರಾರ್ಥನೆಯನ್ನೂ ಸಲ್ಲಿಸಬಾರದು ಎಂದು ಜಮಾತೆ ಅಹಾಲೆ ಸುನ್ನಾತ್ ಪಾಕಿಸ್ತಾನ ಸಲಹೆಯನ್ನೂ ನೀಡಿತ್ತು.