ರಾಜ್ಯಪಾಲ ಸಲ್ಮಾನ್ ತಾಸೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಕೆಲವು ಮುಖಂಡರನ್ನು ಸೆರೆ ಹಿಡಿಯಲಾಗಿದೆ. ಆದರೆ ಗವರ್ನರ್ ಹತ್ಯೆಯ ಹಿಂದೆ ವಿರೋಧ ಪಕ್ಷವಾದ ಪಿಎಂಎಲ್(ಎನ್) ಶಾಮೀಲಾಗಿರುವುದಾಗಿ ಬಲವಾಗಿ ಶಂಕಿಸಿದ್ದಾರೆ.
ಗವರ್ನರ್ ಹತ್ಯೆಯ ಸಂಚಿನಲ್ಲಿ ಪಿಪಿಪಿಯನ್ನು ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಮಂಗಳವಾರ ಅಂಗರಕ್ಷಕನೇ ಗುಂಡಿಟ್ಟು ಹತ್ಯೆಗೈದಿದ್ದ. ರಾಜ್ಯಪಾಲರು ಧಾರ್ಮಿಕ ನಿಂದನೆ ಕಾಯ್ದೆ ವಿರುದ್ಧವಾಗಿ ಮಾತನಾಡಿರುವುದೇ ಅವರನ್ನು ಹತ್ಯೆಗೈಯಲು ಕಾರಣ ಎಂದು ಹಂತಕ ಅಂಗರಕ್ಷಕ ಮಲಿಕ್ ಬಂಧಿಸಲ್ಪಟ್ಟ ನಂತರ ಪೊಲೀಸರಿಗೆ ತಿಳಿಸಿದ್ದ.
ಅಲ್ಲದೆ, ರಾಜ್ಯಪಾಲರ ಹತ್ಯೆಯ ಸಂಚಿನ ಹಿಂದೆ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಗವರ್ನರ್ ಅವರನ್ನು ಧಾರ್ಮಿಕ ಕಾರಣಕ್ಕಾಗಿಯೇ ಹತ್ಯೆಗೈಯಲಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪಿಪಿಪಿ ವಕ್ತಾರ ಫೌಜಿಯಾ ವಾಹಾಬ್ ವಿವರಿಸಿದ್ದು, ಅವರ ಕೊಲೆಯ ಹಿಂದೆ ರಾಜಕೀಯ ಸಂಚಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.