ಪಾಕ್‌ನ ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಹತ್ಯೆಗೈದಿರುವುದಕ್ಕೆ ತಾವೇ ಹೊಣೆ ಎಂದು ಪಾಕಿಸ್ತಾನಿ ತಾಲಿಬಾನ್ ಜತೆ ನಿಕಟ ಸಂಪರ್ಕ ಹೊಂದಿರುವ ಆತ್ಮಹತ್ಯಾ ಬಾಂಬರ್ಸ್ ತರಬೇತುದಾರ ಖ್ವಾರಿ ಹುಸೈನ್ ಗುರುವಾರ ತಿಳಿಸಿದ್ದು, ಗವರ್ನರ್ ಅವರನ್ನು ಕೊಂದ ವ್ಯಕ್ತಿ ನಮ್ಮವ ಎಂದು ಹೇಳಿದ್ದಾನೆ.
ಸಲ್ಮಾನ್ ತಾಸೀರ್ ಅವರ ಹತ್ಯೆಯ ಹೊಣೆಯನ್ನು ನಾವು ಹೊರುತ್ತೇವೆ. ಪಂಜಾಬ್ ಗವರ್ನರ್ ನಮ್ಮ ಟಾರ್ಗೆಟ್ ಆಗಿದ್ದರು. ಹಾಗಾಗಿ ಅವರ ಹತ್ಯೆಗೆ ನಾವು ಸಂಚು ರೂಪಿಸಿ, ಅದರಲ್ಲಿ ಯಶಸ್ವಿಯಾಗಿದ್ದೇವೆ. ಅವರನ್ನು ಕೊಂದ ವ್ಯಕ್ತಿ ನಮ್ಮವ ಎಂದು ಆತ್ಮಹತ್ಯಾ ದಾಳಿ ಗುಂಪಿನ ಖ್ವಾರಿ ಹುಸೈನ್‌ನ ವಕ್ತಾರ ಶಾಕಿರುಲ್ಲಾ ಶಾಕಿರ್ ರಹಸ್ಯ ಸ್ಥಳದಿಂದ ದೂರವಾಣಿ ಮೂಲಕ ತಿಳಿಸಿದ್ದಾನೆ.
ಅದೇ ರೀತಿ ಯಾರೇ ಆಗಲಿ ಇಸ್ಲಾಮ್ ವಿರುದ್ಧ ಧ್ವನಿ ಎತ್ತಿದರೆ ಅವರಿಗೆ ಸಾವೇ ಗತಿ ಎಂಬುದಾಗಿಯೂ ಎಚ್ಚರಿಸಿದ್ದಾನೆ. ಧಾರ್ಮಿಕ ನಿಂದನೆ ಕಾಯ್ದೆಯಡಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿಗೆ ಸಲ್ಮಾನ್ ತಾಸೀರ್ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಹತ್ಯೆಗೈದಿರುವುದಾಗಿ ಶಾಕಿರ್ ವಿವರಿಸಿದ್ದಾನೆ.
ಗವರ್ನರ್ ಸಲ್ಮಾನ್ ತಾಸೀರ್ ಅವರನ್ನು ಇಸ್ಲಾಮಾಬಾದ್ ಮಾರ್ಕೆಟ್ ಪ್ರದೇಶದ ಸಮೀಪ ಅವರ ಅಂಗರಕ್ಷಕ ಮಲಿಕ್ ಖಾದ್ರಿ ಗುಂಡಿಟ್ಟು ಹತ್ಯೆಗೈದಿದ್ದ. ಘಟನೆ ನಂತರ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.