ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್-5ನೇ ಮದುವೆ ಫ್ಲ್ಯಾನ್; ಹೆಂಡ್ತಿಯರಿಂದ್ಲೇ ಗಂಡನಿಗೆ ಗೂಸಾ! (Wives beat up man | Pakistan | Punjab | 5th marriage | beaten up)
Bookmark and Share Feedback Print
 
ಐದನೇ ಮದುವೆಗೆ ತಯಾರಿ ನಡೆಸುತ್ತಿದ್ದಾನೆಂಬ ಸುದ್ದಿ ತಿಳಿದು ಆಕ್ರೋಶಗೊಂಡ ಇಬ್ಬರು ಪತ್ನಿಯರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪತಿರಾಯನಿಗೆ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಇಲ್ಲಿನ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ನಗರದ ನಿವಾಸಿಯಾಗಿರುವ ಮಿಯಾನ್ ಐಸಾಕ್ ತನ್ನ ಮೂರನೇ ಪತ್ನಿ ಜತೆ ಗೆಳೆಯನ ರಿಸೆಪ್ಶನ್ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಆತನ ಮೊದಲಿನ ಇಬ್ಬರು ಹೆಂಡತಿಯರಾದ ಮೆಹ್‌ವಿಶ್ ಮತ್ತು ಉಜ್ಮಾ ನೂರಾರು ಅತಿಥಿಗಳ ಸಮ್ಮುಖದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು.

ನಮಗೆ ಗೊತ್ತು, ಈ ಖದೀಮ ಐದನೇ ಮದುವೆಯಾಗಲು ತಯಾರಿ ನಡೆಸುತ್ತಿದ್ದಾನೆ. ಅದಕ್ಕಾಗಿ ಆತನಿಗೆ ಸಾರ್ವಜನಿಕವಾಗಿಯೇ ಮಂಗಳಾರತಿ ಮಾಡಿದ್ದು ಎಂದು ಉಜ್ಮಾ ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದ್ದಳು. ಇಬ್ಬರು ಪತ್ನಿಯರು ಶೂನಿಂದ ಪತಿ ಐಸಾಕ್‌ಗೆ ಹೊಡೆಯುತ್ತಿರುವ ದೃಶ್ಯವನ್ನು ಚಾನೆಲ್‌ಗಳು ನಿರಂತರವಾಗಿ ಪ್ರಸಾರ ಮಾಡಿದ್ದವು.

ಗಂಡನ ಮದುವೆ ಚಾಳಿಯಿಂದ ರೋಸಿ ಹೋಗಿರುವ ಈ ಇಬ್ಬರು ಪತ್ನಿಯರು ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ಐಸಾಕ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಆದರೆ ತಾನು ಐದನೇ ಮದುವೆಯಾಗಲು ಹೊರಟಿದ್ದೇನೆ ಎಂಬ ಪತ್ನಿಯರ ಆರೋಪ ಸುಳ್ಳು ಎಂದು ಐಸಾಕ್ ತಿಳಿಸಿದ್ದಾನೆ.

ಇದು ಲಜ್ಜೆಗೆಟ್ಟ ಸುಳ್ಳು. ನಾನು ಐದನೆ ಮದುವೆಯಾಗಲು ಹೊರಟಿಲ್ಲ. ನನಗೆ ನನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಗೊತ್ತು. ನನಗೆ ಇರುವುದು ಮೂವರೇ ಪತ್ನಿಯರು. ಆದರೆ ಈಗ ಮೂರನೇ ಪತ್ನಿ ಫೌಜಿಯಾ ಜತೆ ವಾಸಿಸುತ್ತಿದ್ದೇನೆ. ಇಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಅಷ್ಟೇ ಅಲ್ಲ ಮೂರು ಮದುವೆಯಾಗುವುದು ಇಸ್ಲಾಮ್ ಪ್ರಕಾರ ತಪ್ಪಲ್ಲ ಎಂಬುದಾಗಿ ಐಸಾಕ್ ಸಮಜಾಯಿಷಿ ನೀಡಿದ್ದಾನೆ.

ಈ ಇಬ್ಬರು ಪತ್ನಿಯರೇ ಅನಾವಶ್ಯಕವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವರದಿ ಮಾಡಿದೆ. ಅಂತೂ ರಿಸೆಪ್ಶೆನ್‌ನಲ್ಲಿ ರಂಪಾಟ ನಡೆಸಿದ ಉಜ್ಮಾ, ಮೆಹ್‌ವಿಶ್ ಹಾಗೂ ಐಸಾಕ್‌ ಪೊಲೀಸರ ಅತಿಥಿಯಾಗಿದ್ದಾರೆ. ಅಲ್ಲದೇ, ತಾನು ಮೂರು ಮದುವೆಯಾಗಿರುವ ಬಗ್ಗೆ ದಾಖಲಾತಿಯನ್ನು ಐಸಾಕ್ ಪೊಲೀಸರಿಗೆ ನೀಡಿದ್ದಾನೆ. ಆತ ಐದನೇ ಮದುವೆಯಾಗಲು ತಯಾರಿ ನಡೆಸಿರುವ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ