ಎಲ್‌ಟಿಟಿಇಯನ್ನು ಬಗ್ಗು ಬಡಿದಿದ್ದ ಶ್ರೀಲಂಕಾ ಮಿಲಿಟರಿ ಪಡೆ, ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಹಿನ್ನೆಲೆಯಲ್ಲಿ ತರಕಾರಿಗಳನ್ನು ಮಾರಲು ಮುಂದಾಗಲಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತುಂಬಾ ಹೊರೆಯಾಗಿದೆ. ಆ ನಿಟ್ಟಿನಲ್ಲಿ ಆರ್ಮಿ ಗ್ರಾಹಕ ಕೇಂದ್ರಗಳಿಗೆ ಕಡಿಮೆ ದರದಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಿರುವುದಾಗಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ವಿವರಿಸಿದೆ.
ಹಾಗಾಗಿ ಕೊಲಂಬೊ ಮತ್ತು ಸುತ್ತ ಮುತ್ತಲಿನ ಸುಮಾರು 14 ಗ್ರಾಹಕ ಕೇಂದ್ರಗಳಿಗೆ ಮಿಲಿಟರಿ ತರಕಾರಿಗಳನ್ನು ಮಾರಾಟ ಮಾಡಲು ಆರಂಭಿಸಿದೆ ಎಂದು ಹೇಳಿದೆ. ಕೃಷಿಕರಿಂದ ನೇರವಾಗಿ ತರಕಾರಿಗಳನ್ನು ಮಿಲಿಟರಿ ಖರೀದಿಸಿರುವುದರಿಂದ ಜನಸಾಮಾನ್ಯರು ಕಡಿಮೆ ದರದಲ್ಲಿ ತರಕಾರಿಗಳನ್ನು ಖರೀದಿಸಿಬಹುದಾಗಿದೆ ಎಂದು ತಿಳಿಸಿದೆ.
ಆರ್ಮಿ ಕ್ಯಾಂಪ್‌ಗಳ ಮೂಲಕ ರೈತರಿಂದ ನೇರವಾಗಿ ತರಕಾರಿ ಖರೀದಿಸಿ, ಅದನ್ನು ಗ್ರಾಹಕ ಕೇಂದ್ರಗಳಿಗೆ ನೀಡಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುವುದರಿಂದ ದಿನಬಳಕೆ ವಸ್ತುಗಳನ್ನು ಹೆಚ್ಚು ಬೆಲೆ ನೀಡಿ ಖರೀದಿಸುವ ಅಗತ್ಯತೆ ಬೀಳುವುದಿಲ್ಲ ಎಂದು ಆರ್ಮಿ ಸ್ಪಷ್ಟಪಡಿಸಿದೆ.