ಬಾಂಬ್ ತಯಾರಿಕೆಯಲ್ಲಿ ಪರಿಣತನಾಗಿರುವ ತಾಲಿಬಾನ್ ಮುಖಂಡನೊಬ್ಬ ಅಫ್ಘಾನಿಸ್ತಾನ ಮತ್ತು ನ್ಯಾಟೋ ಪಡೆಗಳ ಬಲೆಗೆ ಸಿಕ್ಕಿಬಿದ್ದಿರುವುದಾಗಿ ನ್ಯಾಟೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ತಾಲಿಬಾನ್ ಮುಖಂಡ ಖ್ವಾಲ್ಟ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈತ ಅಫ್ಘಾನ್ ಮತ್ತು ನ್ಯಾಟೋ ಪಡೆ ವಾಹನಗಳ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಹೊಣೆಗಾರನಾಗಿದ್ದಾನೆ. ನ್ಯಾಟೋ ಮತ್ತು ಅಫ್ಘಾನ್ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಮುಖಂಡ ಜಾಬುಲ್ ಪ್ರಾಂತ್ಯದಲ್ಲಿ ಸೆರೆ ಸಿಕ್ಕಿರುವುದಾಗಿ ನ್ಯಾಟೋ ಹೇಳಿದೆ.
ಅಲ್ಲದೇ ನ್ಯಾಟೋ ಮತ್ತು ಅಫ್ಘಾನ್ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವ ವೀಡಿಯೋ ಟೇಪ್ ಕೂಡ ದೊರೆತಿರುವುದಾಗಿ ನ್ಯಾಟೋ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ನೂ ಸುಮಾರು ಹತ್ತು ಮಂದಿ ತಾಲಿಬಾನ್ ಮುಖಂಡರನ್ನು ಸೆರೆ ಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.