ಏರ್ ಇಂಡಿಯಾ ಕಾನಿಷ್ಕಾ ಬಾಂಬ್ ದಾಳಿ ಪ್ರಕರಣದ ವಿಚಾರಣೆಯಲ್ಲಿ ಇಂದರ್‌ಜಿತ್ ಸಿಂಗ್ ರೆಯಾಟ್ ದೋಷಿಯಾಗಿದ್ದು, ಮತ್ತೆ ಒಂಬತ್ತು ವರ್ಷಗಳ ಕಾಲ ಹೆಚ್ಚುವರಿ ಜೈಲುಶಿಕ್ಷೆಯನ್ನು ವ್ಯಾನ್‌ಕೋವರ್ ಕೋರ್ಟ್ ವಿಧಿಸಿದೆ.
1985 ಜೂನ್ 23ರಂದು ಏರ್ ಇಂಡಿಯಾ ಕಾನಿಷ್ಕ ವಿಮಾನ ದೆಹಲಿಯಿಂದ ಮೊನ್‌ಟ್ರೆಯಲ್‌ನತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಐರ್ಲ್ಯಾಂಡ್ ಸಮೀಪ ಸ್ಫೋಟಗೊಂಡು ಎಲ್ಲಾ 329 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.
ಈ ಘಟನೆ ಬೆನ್ನಲ್ಲೇ 1ಗಂಟೆಯ ನಂತರ ಮತ್ತೊಂದು ಟೋಕಿಯೊದಿಂದ ಮುಂಬೈನತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೋಕಿಯೊ ವಿಮಾನ ನಿಲ್ದಾಣದಲ್ಲಿಯೇ ಸ್ಫೋಟಗೊಂಡು ಇಬ್ಬರು ಲಗೇಜ್ ಕಾರ್ಮಿಕರು ಬಲಿಯಾಗಿದ್ದರು.
1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರಕಾರ ಸಿಖ್ ಸಮುದಾಯದ ಪವಿತ್ರ ಗೋಲ್ಡನ್ ಟೆಂಪಲ್ ಒಳಗೆ ಮಿಲಿಟರಿ ಪಡೆ ನುಗ್ಗಿಸಿ ಉಗ್ರರನ್ನು ಹೊರಹಾಕಿದ್ದಕ್ಕೆ ವ್ಯಾನ್‌ಕೋವರ್ ಮೂಲದ ಖಾಲಿಸ್ತಾನ್ ಉಗ್ರರು ಈ ಎರಡೂ ಬಾಂಬ್ ಸ್ಫೋಟದ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದರು.
ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ರೆಯಾಟ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ ಏಕೈಕ ಅಪರಾಧಿಯಾಗಿದ್ದ. ಆತನಿಗೆ 1991ರಲ್ಲಿ ಹತ್ತು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ನಂತರ ಮತ್ತೆ ಐದು ವರ್ಷಗಳ ಕಾಲ ಕೋರ್ಟ್ ಜೈಲುಶಿಕ್ಷೆ ನೀಡಿತ್ತು. ನಂತರ 2008ರಲ್ಲಿ ರೆಯಾಟ್ ಜೈಲಿನಿಂದ ಹೊರಬಂದಿದ್ದ.
ಆದರೆ ವಾಂಕೋವರ್ ಮೂಲದ ರಿಪುದಾಮನ್ ಸಿಂಗ್ ಮಲಿಕ್ ಮತ್ತು ಅಜಿಬ್ ಸಿಂಗ್ ಬಾಗ್ರಿಯನ್ನು 2003ರಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ರೆಯಾಟ್ ಸುಳ್ಳು ಮಾಹಿತಿ ನೀಡಿದ್ದ. ಹಾಗಾಗಿ ಅವರಿಬ್ಬರೂ ದೋಷಮುಕ್ತಗೊಂಡಿದ್ದರು. ಇದೀಗ ಅಂತಿಮ ವಿಚಾರಣೆಯಲ್ಲಿ ರೆಯಾಟ್‌ಗೆ ಹೆಚ್ಚುವರಿಯಾಗಿ 9 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದ್ದು, ಇದು ಕೆನಡಾ ಕಾನೂನು ಚರಿತ್ರೆಯಲ್ಲೇ ವಿಧಿಸಿದ ದೊಡ್ಡ ಪ್ರಮಾಣದ ಶಿಕ್ಷೆಯಾಗಿದೆ.