ದೇಶದ ಇಂಧನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪಾಕಿಸ್ತಾನ ನಿರ್ಮಿಸುತ್ತಿರುವ ಎರಡು ಡ್ಯಾಮ್ (ಅಣೆಕಟ್ಟು) ಯೋಜನೆ ಪೂರ್ಣಗೊಳಿಸಲು 66 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.
ಆ ನಿಟ್ಟಿನಲ್ಲಿ ದಕ್ಷಿಣ ವಜಿರಿಸ್ತಾನ ಬುಡಕಟ್ಟು ಪ್ರದೇಶದಲ್ಲಿನ ಗೋಮಾಲ್ ಝಾಮ್ ಡ್ಯಾಮ್ ಹಾಗೂ ಗಿಲ್‌ಜಿಟ್-ಬಾಲ್ಟಿಸ್ತಾನ್‌ನ ಸ್ಕಾರ್ದು ಪ್ರದೇಶದಲ್ಲಿನ ಸಾಟ್‌ಪಾರ್ ಡ್ಯಾಮ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಎರಡು ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಫ್ಘಾನಿಸ್ತಾನ್-ಪಾಕಿಸ್ತಾನ್ ವಿಶೇಷ ಪ್ರತಿನಿಧಿ ಫ್ರಾಂಕ್ ರುಗ್ಗೆರೋ ತಿಳಿಸಿದ್ದಾರೆ.
ಈ ಡ್ಯಾಮ್ ನಿರ್ಮಾಣದಿಂದ 35 ಮೆಗಾ ವ್ಯಾಟ್ ವಿದ್ಯುತ್ ದೊರೆಯಲಿದ್ದು, ಇದರಿಂದಾಗಿ ಸುಮಾರು 55,000 ಮನೆಗಳಿಗೆ ವಿದ್ಯುತ್ ನೀಡಲು ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಪಾಕಿಸ್ತಾನ ತತ್ತರಿಸಿಹೋಗಿತ್ತು. ಹಾಗಾಗಿ ಈ ಎರಡು ಡ್ಯಾಮ್ ನಿರ್ಮಾಣದಿಂದಾಗಿ ಪ್ರವಾಹದ ನೀರನ್ನು ತಡೆಯಲು ಹೆಚ್ಚು ಅನುಕೂಲವಾಗಲಿದೆ. ಅಷ್ಟೇ ಅಲ್ಲ ವಿದ್ಯುತ್ ಕೊರತೆ ನೀಗಿಸಲು ಸಹಾಯಕವಾಗಲಿದೆ ಎಂದು ಫ್ರಾಂಕ್ ವಿವರಿಸಿದ್ದಾರೆ.