ಎರಡು ನಾಯಿಯನ್ನು ಕೊಂದು, ತಿಂದ ತಪ್ಪಿಗಾಗಿ ಐವರು ತೈವಾನಿಯರು ಸುಮಾರು 3,000ಕ್ಕೂ ಅಧಿಕ ಡಾಲರ್ ದಂಡ ತೆರಬೇಕಾಗಿರುವ ಘಟನೆ ನಡೆದಿದ್ದು, ಇದು ತೈಪೆ ಪ್ರದೇಶದಲ್ಲಿ ಕಳೆದ ಒಂದು ದಶಕದಲ್ಲಿನ ಮೊದಲ ಪ್ರಕರಣವಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ತೈಪೆ ಹೊರವಲಯದ ಯಿಂಗ್‌ಕೆ ಎಂಬಲ್ಲಿ 50-60ರ ಹರೆಯದ ಐವರು ತೈವಾನ್ ಮಂದಿ ಎರಡು ನಾಯಿಯನ್ನು ಕೊಂದು, ತಿಂದಿರುವ ಘಟನೆ ಕುರಿತಂತೆ ತನಿಖೆ ನಡೆಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಕಳೆದ ತಿಂಗಳು ಐವರನ್ನು ದೋಷಮುಕ್ತರು ಎಂದು ತಿಳಿಸಿತ್ತು. ಆದರೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕೆ ಐವರು ತಲಾ 100,000 ತೈವಾನ್ ಡಾಲರ್ಸ್ (3,300 ಅಮೆರಿಕನ್ ಡಾಲರ್ಸ್) ದಂಡ ತೆರಬೇಕಾಗಲಿದೆ ಎಂದು ವರದಿಯೊಂದು ವಿವರಿಸಿದೆ.
ಈ ದ್ವೀಪ ಪ್ರದೇಶದಲ್ಲಿ ಚೀನಾ ಮೂಲದ ಕೆಲವು ಜನರು ನಾಯಿಯನ್ನು ತಿನ್ನುತ್ತಾರಂತೆ. ಆದರೆ ಇಲ್ಲಿನ ಸ್ಥಳೀಯ ಕಾಯ್ದೆಯನ್ವಯ ನಾಯಿ ಅಥವಾ ಬೆಕ್ಕನ್ನು ತಿನ್ನುವುದು ಅಪರಾಧ. ಒಂದು ವೇಳೆ ಅಂತಹ ಅಪರಾಧದಲ್ಲಿ ಸಿಕ್ಕಿಬಿದ್ದರೆ ಅವರು 500,000 ತೈವಾನ್ ಡಾಲರ್ಸ್‌ವರೆಗೆ ದಂಡ ತೆರಬೇಕಾಗುತ್ತದೆ.
ಆ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗ್ರೇಟರ್ ತೈಪೆ ಪ್ರದೇಶದಲ್ಲಿ ನಾಯಿಯನ್ನು ಕೊಂದು ತಿಂದ ಘಟನೆ ಇದೇ ಮೊದಲನೆಯದ್ದಾಗಿದೆ ಎಂದು ನ್ಯೂ ತೈಪೆ ಸಿಟಿ ಗವರ್ನರ್ ಹೈ ಸಂಗ್ ಚಿಚ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇದೀಗ ಘಟನೆಯಲ್ಲಿ ಸಿಕ್ಕಿ ಬಿದ್ದಿರುವ ಐವರು 3 ಸಾವಿರಕ್ಕೂ ಅಧಿಕ ಡಾಲರ್ ದಂಡ ತೆರಬೇಕಾಗುತ್ತದೆ ಎಂದು ವಿವರಿಸಿದ್ದಾರೆ.