ಪಾಕ್: ಗವರ್ನರ್ ಆಯ್ತು-ಈಗ ಶೆರ್ರೈ ರೆಹಮಾನ್ ಹತ್ಯೆಗೆ ಫತ್ವಾ
ಇಸ್ಲಾಮಾಬಾದ್, ಸೋಮವಾರ, 10 ಜನವರಿ 2011( 12:25 IST )
ಧಾರ್ಮಿಕ ನಿಂದನೆ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಕರೆ ನೀಡಿರುವ ಪಾಕಿಸ್ತಾನದ ಮಾಜಿ ಸಚಿವೆ ಶೆರ್ರೈ ರೆಹಮಾನ್ ವಿರುದ್ಧ ಕೆಲವು ಮೌಲಿಗಳು ಫತ್ವಾ ಹೊರಡಿಸಿದ್ದು, ಆಕೆಯನ್ನು ಕಾಫಿರ್‌ಗೆ ಹೋಲಿಸಿದ್ದಾರೆ. ಆ ನಿಟ್ಟಿನಲ್ಲಿ ಸಿವಿಲ್ ಸೊಸೈಟಿ ಕಾರ್ಯಕರ್ತರು ಕರಾಚಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಶೆರ್ರೈ ರೆಹಮಾನ್ ಕಾಫಿರ್ ಹಾಗೂ ಆಕೆಗೆ ಹತ್ಯೆಯೇ ಸೂಕ್ತವಾದ ಶಿಕ್ಷೆ ಎಂದು ಕರಾಚಿಯ ಪ್ರತಿಷ್ಠಿತ ಮಸೀದಿಯೊಂದರ ಇಮಾಮ್ ಆಗಿರುವ ಸುಲ್ತಾನ್ ಮಸ್ಜಿದ್ ಘೋಷಿಸಿದ್ದಾರೆ.
ಈ ಮಸೀದಿ ಸೌದಿ ಅರೇಬಿಯಾ ಸರಕಾರದ ಜತೆ ನಿಕಟ ಸಂಪರ್ಕ ಹೊಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಧಾರ್ಮಿಕ ನಿಂದನಾ ಕಾಯ್ದೆ ತಿದ್ದುಪಡಿಗೆ ಪಾಕಿಸ್ತಾನದ ಮುಸ್ಲಿಮರು ಸಹಕಾರ ನೀಡಬೇಕೆಂದು ಶೆರ್ರೈ ರೆಹಮಾನ್ ಮನವಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಇಸ್ಲಾಮಿಕ್‌ನ ಕಟ್ಟಾ ಧಾರ್ಮಿಕ ಮುಖಂಡರು ರೆಹಮಾನ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಧಾರ್ಮಿಕ ನಿಂದನಾ ಕಾಯ್ದೆಯನ್ನು ಟೀಕಿಸಿದ್ದ ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ರೆಹಮಾನ್ ಅವರನ್ನು ಇತ್ತೀಚೆಗಷ್ಟೇ ಅವರ ಅಂಗರಕ್ಷಕ ಮಲಿಕ್ ಗುಂಡಿಟ್ಟು ಹತ್ಯೆಗೈದಿದ್ದ. ಇದೀಗ ಶೆರ್ರೈ ರೆಹಮಾನ್ ವಿರುದ್ಧವೂ ಹತ್ಯೆ ಬೆದರಿಕೆ ಒಡ್ಡಿದ್ದಾರೆ. ಆ ನಿಟ್ಟಿನಲ್ಲಿ ಫತ್ವಾ ಹೊರಡಿಸಿರುವ ಇಮಾಮ್ ಸುಲ್ತಾನ್ ಮಸ್‌ಜಿದ್ ವಿರುದ್ಧ ಸಿವಿಲ್ ಸೊಸೈಟಿ ಕಾರ್ಯಕರ್ತರು ಕರಾಚಿಯ ದಾರಾಕ್ಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.