ದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯಬೇಕೆಂಬ ಇಚ್ಛೆ ಇಲ್ಲ, ಹಾಗಾಗಿ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮೈತ್ರಿಕೂಟದ ಸರಕಾರ ಪೂರ್ಣಾವಧಿ ಮುಗಿಸಬೇಕು ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಜ್(ಪಿಎಂಎಲ್-ಎನ್) ಅಧ್ಯಕ್ಷ, ಮಾಜಿ ಪ್ರಧಾನಿ ನವಾಜ್ ಶರೀಫ್ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಪಿಪಿಪಿ ಸರಕಾರವನ್ನು ಬೀಳಿಸುವ ಕುತಂತ್ರಕ್ಕೆ ಇಳಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಆ ನಿಟ್ಟಿನಲ್ಲಿ ತಮ್ಮ ಹತ್ತು ಅಂಶಗಳ ಅಜೆಂಡಾವನ್ನು ಅನುಷ್ಠಾನಗೊಳಿಸಲು ಅನುಕೂಲ ಕಲ್ಪಿಸುವ ನೆಲೆಯಲ್ಲಿ ಪಿಪಿಪಿಗೆ ತಮ್ಮ ಬೆಂಬಲವನ್ನು ಮುಂದುವರಿಸುವುದಾಗಿ ವಿವರಿಸಿದ್ದಾರೆ.
ಪಿಎಂಎಲ್-ಎನ್‌ನ ಅಜೆಂಡಾ ಅಭಿವೃದ್ಧಿ ಪರವಾಗಿದೆ. ಅಷ್ಟೇ ಅಲ್ಲ ದೇಶದ ಏಳಿಗೆಗೆ ಪೂರಕವಾಗಿರುವುದಾಗಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ನವಾಜ್ ಅವರಿಗೆ ದೂರವಾಣಿ ಕರೆ ಮೂಲಕ ತಿಳಿಸಿ ಶ್ಲಾಘಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆಂದು ಡೈಲಿ ಟೈಮ್ಸ್ ವರದಿ ಮಾಡಿದೆ.