ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಸಾಮಾ ಅಳಿಯ ಕೂಡ ಉಗ್ರ; ಇಂಟರ್‌ಪೋಲ್‌ಗೆ ಪಟ್ಟಿ ರವಾನೆ (Saudi Arabia | Interpol's wanted list | al Qaeda | Osama bin Laden | Barikan)
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್ ಅಳಿಯ ಸೇರಿದಂತೆ ನೂತನ 47 ವಾಟೆಂಡ್ ಟೆರರಿಸ್ಟ್‌ಗಳ ಪಟ್ಟಿಯನ್ನು ಸೌದಿ ಅರೇಬಿಯಾ ಅಧಿಕಾರಿಗಳು ಅಂತಾರಾಷ್ಟ್ರೀಯ ಪೊಲೀಸ್ ಏಜೆನ್ಸಿ ಇಂಟರ್‌ಪೋಲ್‌ಗೆ ಹಸ್ತಾಂತರಿಸಿದೆ.
ಶಂಕಿತ 47 ಉಗ್ರರ ಪಟ್ಟಿಯಲ್ಲಿ ಒಸಾಮಾ ಅಳಿಯ ಮುಹಮ್ಮದ್ ಸಲೀಮ್ ಬಾರಿಖಾನ್ 39ನೇ ಸ್ಥಾನದಲ್ಲಿದ್ದಾನೆ. ಈ ಪಟ್ಟಿಯನ್ನು ಸೌದಿ ಅರೇಬಿಯಾ ಸರಕಾರ ಇಂಟರ್‌ಪೋಲ್‌ಗೆ ನೀಡಿರುವುದಾಗಿ ಅರಬ್ ಭಾಷೆಯ ಅಲ್ ಹಯಾತ್ ಪತ್ರಿಕೆ ವರದಿ ಮಾಡಿದೆ.
ಬಾರಿಖಾನ್(47) ಒಸಾಮಾನ ಅಂಗರಕ್ಷಕನಾಗಿ ಕಾರ್ಯನಿರ್ವಹಿಸಿದ್ದ. ನಂತರ ಈತ ಒಸಾಮಾ ಬಿನ್ ಲಾಡೆನ್ ಪುತ್ರಿ ಫಾತಿಮಾ(13)ಳನ್ನು ವಿವಾಹವಾಗಿದ್ದ. ಬಾರಿಖಾನ್ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಭಾಗ ಪ್ರದೇಶದ ಗುಹೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಠಿಕಾಣಿ ಹೂಡಿರುವುದಾಗಿಯೂ ವರದಿ ವಿವರಿಸಿದೆ.
ಬಾರಿಖಾನ್ 1997ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದ. ನಂತರ ಈತ ಅಫ್ಘಾನಿಸ್ತಾನದಲ್ಲಿ ಅಲ್ ಖಾಯಿದಾ ಗುಂಪಿಗೆ ಸೇರಿದ್ದ. ಬಾರಿಖಾನ್ ಸೇರಿದಂತೆ ಎಲ್ಲಾ 47 ಉಗ್ರರು ಯೆಮೆನ್‌ನಲ್ಲಿರುವ ಅಲ್ ಖಾಯಿದಾ ಸಂಘಟನೆಗೆ ಶಸ್ತ್ರಾಸ್ತ್ರ ಮತ್ತು ಹಣಕಾಸು ಪೂರೈಕೆಯಲ್ಲಿ ತೊಡಗಿದ್ದಾರೆಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್ ತುರ್ಕಿ ತಿಳಿಸಿದ್ದಾರೆ.