ಮಹತ್ವದ ಬೆಳವಣಿಗೆಯೊಂದರಲ್ಲಿ ಜಮಾತ್ ಉದ್ ದಾವಾ (ಜೆಯುಡಿ) ವರಿಷ್ಠ ಹಫೀಜ್ ಮುಹಮ್ಮದ್ ಸಯೀದ್ ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ್ದು, ಐಎಸ್ಐ ವರಿಷ್ಠ ಹಾಗೂ ಮತ್ತಿತರರು ಅಮೆರಿಕ ಕೋರ್ಟ್‌ಗೆ ಹಾಜರಾಗುವ ಮುನ್ನ ಪಾಕಿಸ್ತಾನ ಸರಕಾರ ತನ್ನ ಪರವಾಗಿ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾನೆ.
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್ಐ ವರಿಷ್ಠ ಹಾಗೂ ಇನ್ನಿತರರು ಅಮೆರಿಕ ಕೋರ್ಟ್‌ಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿತ್ತು.
ಇದರಲ್ಲಿ ಸಯೀದ್, ಕಾರ್ಯಾಚರಣೆಯ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿ, ಐಎಸ್ಐ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶೂಜಾ ಪಾಶಾ, ನಿವೃತ್ತ ಲೆಫ್ಟಿನೆಂಟ್ ಜನರಲ್ ನಾದೀಮ್ ತಾಜ್, ಮೇಜರ್ ಅಲಿ, ಮೇಜರ್ ಇಕ್ಬಾಲ್ ಅಮೆರಿಕ ಕೋರ್ಟ್‌ಗೆ ಹಾಜರಾಗಬೇಕೆಂದು ಸಮನ್ಸ್ ಕಳುಹಿಸಿತ್ತು.
2008 ನವೆಂಬರ್ 26ರಂದು ಸಂಭವಿಸಿದ ಮುಂಬೈ ದಾಳಿಯಲ್ಲಿ ಮೃತಪಟ್ಟ ಅಮೆರಿಕ ಪ್ರಜೆಗಳ ಸಂಬಂಧಿಗಳು ಅಮೆರಿಕ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.
ಹಫೀಜ್ ಸಯೀದ್ ಜಮಾತ್ ಉದ್ ದಾವಾದ ಮುಖ್ಯಸ್ಥರು, ಅದೊಂದು ಧನ ಸಹಾಯ ನೀಡುವ ಸಂಸ್ಥೆ. ಅಷ್ಟೇ ಅಲ್ಲ ಜೆಯುಡಿಗೂ ಲಷ್ಕರ್ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಹಫೀಜ್ ಪರ ವಕೀಲ ಡೋಗಾರ್ ತಿಳಿಸಿದ್ದಾರೆ.
ಪಾಕಿಸ್ತಾನ ಸರಕಾರ ಹಫೀಜ್ ಅವರನ್ನು 2009ರಲ್ಲಿ ಬಂಧಿಸಿತ್ತು. ನಂತರ ಲಾಹೋರ್ ಹೈಕೋರ್ಟ್‌ನ ಪೂರ್ಣಪೀಠ ಹಫೀಜ್‌ನನ್ನು ಬಿಡುಗಡೆಗೊಳಿಸಿತ್ತು. ಆ ನಿಟ್ಟಿನಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಐಎಸ್ಐ ವರಿಷ್ಠ ಪಾಶಾ ಅವರನ್ನು ಪಾಕಿಸ್ತಾನ ಸರಕಾರ ಪೂರ್ಣವಾಗಿ ಬೆಂಬಲಿಸಿತ್ತು. ಅದೇ ರೀತಿ ಸಯೀದ್ ಅವರನ್ನೂ ಕೂಡ ಪಾಕ್ ಸರಕಾರ ಬೆಂಬಲಿಸಬೇಕು. ಯಾಕೆಂದರೆ ಅವರೊಬ್ಬ ಪಾಕಿಸ್ತಾನಿ ಎಂದು ಡೋಗಾರ್ ವಿವರಿಸಿದ್ದಾರೆ.