ಜಾಗತಿಕ ಭಯೋತ್ಪಾದನೆಗೆ ಪಾಕಿಸ್ತಾನ ಪ್ರಸಕ್ತ ಸ್ಥಳವಾಗಿದೆ ಎಂದು ಅಮೆರಿಕ ಮಿಲಿಟರಿ ಉನ್ನತ ಅಧಿಕಾರಿಯೊಬ್ಬರು ಮತ್ತೆ ಗಂಭೀರವಾಗಿ ಆರೋಪಿಸಿದ್ದು, ಉಗ್ರರಿಗೆ ಸ್ವರ್ಗವಾಗಿರುವ ಪಾಕ್‌ನಲ್ಲಿ ಅವರನ್ನು ಮಟ್ಟಹಾಕದೆ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಮೊದಲು ಕೂಡ ನಾನು ಈ ಹೇಳಿಕೆ ನೀಡಿದ್ದೇನೆ. ಮತ್ತೆ ಪುನಃ ಹೇಳುತ್ತಿದ್ದೇನೆ. ಜಾಗತಿಕ ಭಯೋತ್ಪಾದನೆಗೆ ಪಾಕ್ ಎಪಿಕ್ ಸೆಂಟರ್ ಆಗಿದೆ. ಅಲ್ಲಿರುವ ಉಗ್ರರಿಂದಲೇ ಇಡೀ ವಿಶ್ವಕ್ಕೆ ಮಾರಕವಾಗಿದೆ. ಅವರನ್ನು ಬೇರುಸಹಿತ ಮಟ್ಟಹಾಕದೆ ಪ್ರಗತಿ ಸಾಧ್ಯವಿಲ್ಲ ಎಂದು ಅಡ್ಮಿರಲ್ ಮೈಕ್ ಮುಲ್ಲೆನ್ ಹೇಳಿದ್ದಾರೆ.
ಅವರು ಅಮೆರಿಕ ಮೂಲದ ವಿದೇಶಿ ಪತ್ರಕರ್ತರ ಜತೆ ಮಾತನಾಡುತ್ತ, ಆ ನಿಟ್ಟಿನಲ್ಲಿ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದರು.
ನಾನು ಪಾಕಿಸ್ತಾನದ ಬಗ್ಗೆ ದೂರುತ್ತಿಲ್ಲ. ಆದರೆ ಪಾಕ್ ನೆಲ ಉಗ್ರರಿಗೆ ಸ್ವರ್ಗವಾಗಿದೆ. ಆ ನೆಲೆಯಲ್ಲಿ ಪಾಕಿಸ್ತಾನ ಸರಕಾರ ಅವರಿಗೆ ಯಾವುದೇ ರೀತಿಯ ರಕ್ಷಣೆ ನೀಡದೆ ಮಟ್ಟಹಾಕಬೇಕೆಂದು ಒತ್ತಾಯಿಸಿದ್ದಾರೆ.