ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಹತ್ಯೆಗೈದ ಪೊಲೀಸ್ ಅಂಗರಕ್ಷಕ ಮುಮ್ತಾಜ್ ಖಾದ್ರಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹಾಗೂ ವಿದೇಶಿ ನಿಯೋಗಗಳ ಅಂಗರಕ್ಷಕನಾಗಿ ಕಾರ್ಯನಿರ್ವಹಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಗವರ್ನರ್ ಹತ್ಯೆ ಬಳಿಕ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಖಾದ್ರಿ, ತಾನು ಕಳೆದ ಮೂರು ವರ್ಷಗಳಲ್ಲಿ ಸುಮಾರು 509 ಸಂದರ್ಭಗಳಲ್ಲಿ ದೇಶದ ಪ್ರಮುಖರಿಗೆ ಒದಗಿಸಲಾಗಿರುವ ಅಂಗರಕ್ಷಕನಾಗಿ ಸೇವೆ ಸಲ್ಲಿಸಿರುವುದಾಗಿ ವಿವರಿಸಿರುವುದಾಗಿ ವರದಿ ಹೇಳಿದೆ. ಅಷ್ಟೇ ಅಲ್ಲ ಇದೀಗ ಅಂಗರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಕೆಲವರು ತೀವ್ರಗಾಮಿಗಳು ಇದ್ದಿರಬಹುದಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿರುವುದಾಗಿ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ತಾಲಿಬಾನ್, ಅಲ್ ಖಾಯಿದಾ ಸೇರಿದಂತೆ ಉಗ್ರರ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಪಡೆ ಕೂಡ ಹೆಚ್ಚಿನ ಮುತುವರ್ಜಿ ವಹಿಸಬೇಕ ಎಂಬ ಎಚ್ಚರಿಕೆಯ ಸಂದೇಶ ಇದಾಗಿದೆ ಎಂದು ವರದಿ ವಿವರಿಸಿದೆ. ಹಾಗಾಗಿ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ಹೊಂದಿರುವ ಪಾಕಿಸ್ತಾನದಲ್ಲಿ ಭದ್ರತಾ ಏಜೆನ್ಸಿಯೊಳಗೆ ತೀವ್ರಗಾಮಿಗಳು ಕಳ್ಳಾಟದಲ್ಲಿ ಸೇರ್ಪಡೆಗೊಳ್ಳುವುದು ತೀವ್ರ ಆತಂಕಕಾರಿ ವಿಷಯ ಎಂದೂ ಎಚ್ಚರಿಸಿದೆ.
ಧಾರ್ಮಿಕ ನಿಂದನಾ ಕಾಯ್ದೆಯನ್ನು ಟೀಕಿಸಿದ್ದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಮುಮ್ತಾಜ್ ಖಾದ್ರಿ(26) ಜನವರಿ 4ರಂದು ಇಸ್ಲಾಮಾಬಾದ್‌ನಲ್ಲಿ ಗುಂಡಿಟ್ಟು ಹತ್ಯೆಗೈದಿದ್ದ. ಈತ ರಾಜ್ಯಪಾಲರ ಅಂಗರಕ್ಷಕ ಸಹ ಆಗಿದ್ದ. ಹತ್ಯೆಯ ನಂತರ ಖಾದ್ರಿ ಪೊಲೀಸರಿಗೆ ಶರಣಾಗಿದ್ದ.
ಬಂಧಿತ ಖಾದ್ರಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್, ಪಿಎಂಎಲ್-ಎನ್ ಮುಖ್ಯಸ್ಥ, ಮಾಜಿ ಪ್ರಧಾನಿ ನವಾಜ್ ಶರೀಫ್, ಪಂಜಾಬ್ ಮುಖ್ಯಮಂತ್ರಿ ಶಾಹಬಾಜ್ ಶರೀಫ್ ಹಾಗೂ ಸಂಸತ್ ವಿರೋಧ ಪಕ್ಷದ ನಾಯಕ ಚೌಧರಿ ನಿಸಾರ್ ಅಲಿ ಖಾನ್, ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಇಫ್ತಿಕಾರ್ ಚೌಧರಿ ಅವರಿಗೂ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದ.