ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡುವಂತಿಲ್ಲ: ಬಾಂಗ್ಲಾ ಕೋರ್ಟ್
ಢಾಕಾ, ಶನಿವಾರ, 15 ಜನವರಿ 2011( 09:43 IST )
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ದೈಹಿಕ ಶಿಕ್ಷೆ ನೀಡುವುದು ಕಾನೂನು ಬಾಹಿರ ಮತ್ತು ಸಂವಿಧಾನಬಾಹಿರವಾದದ್ದು ಎಂದು ಬಾಂಗ್ಲಾದೇಶ ಹೈಕೋರ್ಟ್ ಘೋಷಿಸಿದ್ದು, ಆ ನಿಟ್ಟಿನಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡುವುದಕ್ಕೆ ನಿಷೇಧ ಹೇರಿದೆ.
ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷೆ ನೀಡುವುದನ್ನು ನಿಷೇಧಿಸಿ ಬಾಂಗ್ಲಾ ಸರಕಾರ 2010ರಲ್ಲಿ ಹೊರಡಿಸಿರುವ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆಯೂ ಹೈಕೋರ್ಟ್ ಪೀಠದ ನ್ಯಾ.ಮೊಹಮ್ಮದ್ ಇಮ್ಮಾಮ್ ಅಲಿ ಹಾಗೂ ನ್ಯಾ. ಶೇಕ್ ಹಸನ್ ಆರಿಫ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರದ ಆದೇಶ ಉಲ್ಲಂಘಿಸಿ ಶಿಕ್ಷಕರು ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೂರ ಮತ್ತು ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡುತ್ತಿರುವ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿ ರೈಟ್ಸ್ ಗ್ರೂಪ್ಸ್ ಬಾಂಗ್ಲಾದೇಶ್ ಲೀಗಲ್ ಏಯ್ಡ್ ಅಂಡ್ ಸರ್ವಿಸ್ ಟ್ರಸ್ಟ್ ಹಾಗೂ ಏಯಿನ್ ಸಾಲಿಶ್ ಕೇಂದ್ರ 2010ರ ಜೂನ್ ತಿಂಗಳಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪನ್ನು ಕೊಟ್ಟಿದೆ.
ತದನಂತರ 2010 ಆಗೋಸ್ಟ್‌ನಲ್ಲಿ ಬಾಂಗ್ಲಾ ಸರಕಾರ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡದಂತೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇದೀಗ ಅದೇ ಆದೇಶವನ್ನು ಜಾರಿಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.