ಒಂಬತ್ತನೇ ಅಂತಸ್ತಿನಿಂದ ಆಯ ತಪ್ಪಿ ಕೆಳಗೆ ಬಿದ್ದ ಇಂಡೋನೇಷ್ಯಾ ಮೂಲದ ಮನೆಗೆಲಸದ ಯುವತಿಯೊಬ್ಬಳು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಂಗಾಪುರದಲ್ಲಿ ನಡೆದಿರುವುದಾಗಿ ಸ್ಥಳೀಯ ಮಾಧ್ಯಮವೊಂದರ ವರದಿ ತಿಳಿಸಿದೆ.
ಕಟ್ಟಡದ ಮೇಲೆ ಒಣಗಿಸಿದ ಬಟ್ಟೆಯನ್ನು ತೆಗೆಯಲು ಹೋದ ಸಂದರ್ಭದಲ್ಲಿ 23ರ ಹರೆಯದ ಯುವತಿ ಆಯ ತಪ್ಪಿ ಕಟ್ಟಡದ ಕೆಳಭಾಗದಲ್ಲಿ ರಾಶಿ ಹಾಕಿದ್ದ ಬಿದಿರು ಕಂಬದ ಮೇಲೆ ಬಿದ್ದಿದ್ದಳು ಎಂದು ದಿ ಸಂಡೇ ಟೈಮ್ಸ್ ವರದಿ ಮಾಡಿದೆ.
ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಯುವತಿಯ ಕಾಲು ಮತ್ತು ಬೆನ್ನು ಮೂಳೆ ಮುರಿದಿರುವುದಾಗಿ ಪೊಲೀಸ್ ವಕ್ತಾರರು ತಿಳಿಸಿರುವುದಾಗಿ ವರದಿ ವಿವರಿಸಿದೆ. ಆದರೆ ಯುವತಿಯ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಮನೆಗೆಲಸದವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸಿಂಗಾಪುರ ಸರಕಾರ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಸಿಂಗಾಪುರದಲ್ಲಿ ಸುಮಾರು 200,000 ವಿದೇಶಿ ಮನೆಗೆಲಸದವರಿದ್ದಾರೆ. ಅವರಲ್ಲಿ ಹೆಚ್ಚಿನವರು ಫಿಲಿಫೈನ್ಸ್ ಹಾಗೂ ಇಂಡೋನೇಷ್ಯಾದವರು. ಅಲ್ಲದೇ ವಿದೇಶಿ ಮನೆಗೆಲಸದವರನ್ನು ದಿನಗೂಲಿ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ಸರಕಾರ ನಿಷೇಧ ಹೇರಿದೆ.