ನೆಲ್ಸನ್ ಮಂಡೇಲಾ ಸಾವು?; ಸುಳ್ಳು ಸುದ್ದಿ ಹಬ್ಬಿಸಿದ ಟ್ವಿಟರ್!
ಜೋಹಾನ್ಸ್ಬರ್ಗ್, ಸೋಮವಾರ, 17 ಜನವರಿ 2011( 13:31 IST )
PTI
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ತಳ್ಳಿಹಾಕುವ ಮೂಲಕ ಕಳೆದ ಎರಡು ದಿನಗಳಿಂದ ಹರಿದಾಡುತ್ತಿದ್ದ ಗಾಳಿಸುದ್ದಿಗೆ ತೆರೆ ಎಳೆದಿದೆ.
'ಬ್ರೇಕಿಂಗ್ ನ್ಯೂಸ್ ಅಫ್‌ಡೇಟ್' ಎಂಬುದಾಗಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ದಕ್ಷಿಣ ಆಫ್ರಿಕಾದ ದಂತಕಥೆಯಾಗಿರುವ ನೆಲ್ಸನ್ ಮಂಡೇಲಾ ಅವರು ಸಾವನ್ನಪ್ಪಿದ್ದಾರೆ ಎಂಬುದಾಗಿ ಸುದ್ದಿಯನ್ನು ಹಾಕಲಾಗಿತ್ತು.
ಈ ರೀತಿಯ ಗಾಳಿಸುದ್ದಿ ಹಬ್ಬಿಸುತ್ತಿರುವುದು ಮಂಡೇಲಾ ಕುಟುಂಬಕ್ಕೆ ಆಘಾತ ನೀಡುವ ದುರುದ್ದೇಶವಾಗಿದೆ ಎಂದು ಎಎನ್‌ಸಿ ವಕ್ತಾರ ಜಾಕ್ಸನ್ ಮಾತೆಂಬು ತಿಳಿಸಿದ್ದಾರೆ.
ಮಂಡೇಲಾ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ಎಎನ್‌ಸಿ ತೀವ್ರವಾಗಿ ಖಂಡಿಸಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ದೇಶದಲ್ಲಿ ಆತಂಕ ಮತ್ತು ತಲ್ಲಣ ಹುಟ್ಟು ಹಾಕುವ ಸಂಚು ಇದಾಗಿದೆ ಎಂದು ಜಾಕ್ಸನ್ ಆಕ್ರೋಶವ್ಯಕ್ತಪಡಿಸಿರುವುದಾಗಿ ನ್ಯೂಸ್ 24 ತಿಳಿಸಿದೆ. ಒಬ್ಬ ವ್ಯಕ್ತಿ ಜೀವಂತವಿರುವಾಗಲೇ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದು ಆಫ್ರಿಕಾ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.
ಆ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಟ್ವಿಟರ್ ಬಗ್ಗೆ ತನಿಖೆ ನಡೆಸುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 92ರ ಹರೆಯದ ಮಂಡೇಲಾ ಅವರು ತಮ್ಮ ಪತ್ನಿಯ ಜತೆ ಪ್ರವಾಸದಲ್ಲಿದ್ದಾರೆ ಎಂದು ನೆಲ್ಸನ್ ಮಂಡೇಲಾ ಫೌಂಡೇಶನ್ ಸ್ಪಷ್ಟಪಡಿಸಿದೆ.