ವಿದ್ಯೆ ಕಲಿಯವ ಹಂಬಲ ಇದ್ದವರಿಗೆ ವಯಸ್ಸು ಯಾವುದಾದರೇನು,ತನ್ನ ಅದಮ್ಯ ಇಚ್ಛೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ 25ರ ಹರೆಯದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳ ಜತೆ ತಾನು ಕೂಡ 1ನೇ ತರಗತಿಗೆ ದಾಖಲುಗೊಂಡಿರುವ ಅಪರೂಪದ ಘಟನೆ ಇದಾಗಿದೆ. ವಿದ್ಯೆ ಕಲಿಯಬೇಕೆಂಬ ಜೀವನದ ಕನಸನ್ನು ಇದೀಗ ನನಸು ಮಾಡಿಕೊಳ್ಳುತ್ತಿರುವುದಾಗಿ ಆಕೆ ತಿಳಿಸಿದ್ದಾಳೆ.
ಪಂಜಾಬ್ ಪ್ರಾಂತ್ಯದ ದೌಡ್‌ಖೇಲ್‌ನ ನಿವಾಸಿಯಾಗಿರುವ ಆಸ್ಮಾ (25) ಮಿಯಾನ್‌ವಾಲಿಯ ಹೆಣ್ಮಕ್ಕಳ ಸರಕಾರಿ ಶಾಲೆಯಲ್ಲಿ ತನ್ನಿಬ್ಬರು ಮಕ್ಕಳನ್ನು 1ನೇ ತರಗತಿಗೆ ಸೇರಿಸಿದ್ದಲ್ಲದೇ, ತನ್ನ ಹೆಸರನ್ನೂ ಕೂಡ ದಾಖಲಿಸಿದ್ದಳು.
ಈ ಸಂದರ್ಭದಲ್ಲಿ ಶಾಲಾ ಟೀಚರ್ ನಿನ್ನ ಹೆಸರನ್ನು ಯಾಕೆ ದಾಖಲು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು, ತಾನು ಚಿಕ್ಕವಳಿದ್ದಾಗ ಶಾಲೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಾಗಲೆಲ್ಲ ತನ್ನ ತಂದೆ-ತಾಯಿ ಅಡ್ಡಿ ಮಾಡುತ್ತಿದ್ದರು. ಹಾಗಾಗಿ ಚಿಕ್ಕಂದಿನ ನನ್ನ ಕನಸನ್ನು ಈಗ ನನಸು ಮಾಡಿಕೊಳ್ಳುತ್ತಿದ್ದೇನೆ ಎಂಬುದು ಆಸ್ಮಾ ವಿವರಣೆ.
ಪ್ರತಿದಿನವೂ ಶಾಲೆಗೆ ಹೋಗಬೇಕೆಂಬ ಇಚ್ಛೆ ನನ್ನದಾಗಿತ್ತು, ಆದರೆ ಪೋಷಕರು ನನಗೆ ಯಾವತ್ತೂ ಆ ಅವಕಾಶ ಕೊಡಲೇ ಇಲ್ಲ. ನಂತರ ನನಗೆ ಮದುವೆಯಾಯಿತು. ಇಬ್ಬರು ಮಕ್ಕಳ ತಾಯಿಯಾದೆ, ಆಗ ನಾನು ವಿದ್ಯಾಭ್ಯಾಸ ಕಲಿಯುವ ನನ್ನ ಅವಕಾಶ ಕಳೆದೇ ಹೋಯಿತು ಎಂದು ಭಾವಿಸಿದ್ದೆ ಎಂಬುದಾಗಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನೆ ಪತ್ರಿಕೆ ವರದಿ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ತನ್ನಿಬ್ಬರು ಹೆಣ್ಣು ಮಕ್ಕಳ ಹೆಸರನ್ನು 1ನೇ ತರಗತಿ ಸೇರಿಸಲು ರಿಜಿಸ್ಟರ್ ಮಾಡಿದ್ದೆ. ನಂತರ ನಾನು ಮನೆಗೆ ಹೋದಾಗ ನನ್ನ ಗಂಡನ ಜೊತೆ ಮಾತನಾಡುತ್ತ, ನಾನು ಶಾಲೆಗೆ ಹೋಗದಿದ್ದರೆ ಅದು ನನ್ನ ಜೀವಮಾನವಿಡೀ ಪಶ್ಚಾತ್ತಾಪ ಪಡುವ ಕೆಲಸವಾಗಲಿದೆ ಎಂದು ಹೇಳಿರುವುದಾಗಿ ಪತ್ರಿಕೆ ವಿವರಿಸಿದೆ.
ನಂತರ ಪತಿ ನಿನ್ನ ಹೆಸರನ್ನೂ ಸೇರಿಸು ಎಂದು ಹೇಳಿದಾಗ, ನಿಜಕ್ಕೂ ನಾನು ಅದೃಷ್ಟವಂತೆ ಎಂದು ಭಾವಿಸಿದೆ. ಯಾಕೆಂದರೆ ಹೆಚ್ಚಿನ ಗಂಡಂದಿರುವ ಅದಕ್ಕೆ ಅವಕಾಶ ನೀಡುದಿಲ್ಲ ಎಂದು ಆಸ್ಮಾ ತಿಳಿಸಿದ್ದಾಳೆ. ಅಂತೂ ಆಸ್ಮಾ ಇದೀಗ ತನ್ನಿಬ್ಬರು ಮಕ್ಕಳ ಜೊತೆ 1ನೇ ತರಗತಿಗೆ ತನ್ನ ಹೆಸರನ್ನು ದಾಖಲಿಸಿ, ಶಾಲೆಗೆ ಹೋಗುತ್ತಿದ್ದಾಳೆ.
ಇದೀಗ ತನಗೆ ಸ್ವಲ್ಪ ಪ್ರಮಾಣದಲ್ಲಿ ಬರೆಯಲು, ಓದಲು ಬರುತ್ತಿದೆ. ಅಂತೂ ತಾನು ತನ್ನ ವಿದ್ಯಾಭ್ಯಾಸ ಮುಂದುವರಿಸುವ ಮೂಲಕ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸುತ್ತೇನೆ ಎಂಬ ವಿಶ್ವಾಸ ಆಸ್ಮಾಳದ್ದು.