'ಸ್ವಿಸ್ ಖಾತೆ ರಹಸ್ಯ' ವಿಕಿಲೀಕ್ಸ್ ಕೈಗೆ; ಭಾರತದಲ್ಲಿ ತಳಮಳ!
2000 ಖಾತೆ ವಿವರ, 50 ಮಂದಿ ಪ್ರಭಾವಿ ಭಾರತೀಯರು?
ಲಂಡನ್, ಮಂಗಳವಾರ, 18 ಜನವರಿ 2011( 10:35 IST )
PTI
ಅಮೆರಿಕದ ರಹಸ್ಯ ಮಾಹಿತಿಗಳನ್ನು ಜಗಜ್ಜಾಹೀರು ಮಾಡಿ ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ವಿಕಿಲೀಕ್ಸ್ ಅಸಾಂಜ್ ಕೈಗೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ದೊರಕಿದೆ. ಏಷ್ಯಾ, ಅಮೆರಿಕ ಹಾಗೂ ಬ್ರಿಟನ್‌ನ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಸ್ವಿಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಸುಮಾರು 2000 ಮಂದಿಯ ವಿವರ ಅಸಾಂಜ್ ಕೈಸೇರಿದೆ!
ಸ್ವಿಸ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರುಡಾಲ್ಫ್ ಎಲ್ಮರ್ ಲಂಡನ್‌ನಲ್ಲಿ ಅಸಾಂಜ್‌ಗೆ ರಹಸ್ಯ ಅಕೌಂಟ್ ಹೊಂದಿರುವ ಮಾಹಿತಿಗಳನ್ನೊಳಗೊಂಡ ಎರಡು ಸಿಡಿ ಅನ್ನು ಅಸಾಂಜ್ ಅವರಿಗೆ ಸೋಮವಾರ ಹಸ್ತಾಂತರಿಸಿದ್ದಾರೆ. ಆದರೆ ಇದರಲ್ಲಿ ಭಾರತೀಯ ಅಕೌಂಟ್ ಹೊಂದಿರುವವರು ಎಷ್ಟು ಮಂದಿ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಕೆಲವು ಪ್ರಭಾವಿ ಉದ್ಯಮಿಗಳು ಮತ್ತು ಜನಪ್ರತಿನಿಧಿಗಳು ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಯಾವ ರೀತಿ ಯತ್ನ ನಡೆಸಿದ್ದಾರೆ ಎನ್ನುವುದನ್ನು ಈ ದಾಖಲೆಗಳು ಬಹಿರಂಗಪಡಿಸುತ್ತವೆ ಎಂದು ಅಸಾಂಜ್‌ಗೆ ಸಿಡಿ ಹಸ್ತಾಂತರಿಸಿದ ನಂತರ ಎಲ್ಮರ್ ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದರು.
ಅಸಾಂಜ್ ಇದೀಗ ಸ್ವೀಡನ್‌ನಲ್ಲಿ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಗಡಿಪಾರು ಕುರಿತ ಕಾನೂನು ಸಮರದಲ್ಲಿ ತೊಡಗಿದ್ದಾರೆ. ಆದರೂ ಕಪ್ಪು ಹಣ ಹೊಂದಿರುವ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಕಾರ್ಪೋರೇಟ್ ದಿಗ್ಗಜರ ರಹಸ್ಯ ಅಕೌಂಟ್‌ಗಳ ಮಾಹಿತಿಯನ್ನು ಅಸಾಂಜ್ ಹೊರಹಾಕಲಿದ್ದಾರೆ ಎಂದು ರುಡಾಲ್ಫ್ ತಿಳಿಸಿದ್ದಾರೆ.
ಏತನ್ಮಧ್ಯೆ ಸ್ವಿಕ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವವರ ವಿವರ ತಿಳಿಯುವ ಕುತೂಹಲ ಭಾರತೀಯರಲ್ಲಿ ಹೆಚ್ಚಾಗಿದ್ದರೂ ಕೂಡ ಅಸಾಂಜ್ ಈ ಮಾಹಿತಿಯನ್ನು ಸದ್ಯ ಹೊರಹಾಕುವುದಿಲ್ಲ ಎಂದಿದ್ದಾರೆ. ರುಡಾಲ್ಫ್ ನೀಡಿರುವ ಮಾಹಿತಿಯನ್ನು ಸಂಪೂರ್ಣ ಪರಿಶೀಲನೆ ನಡೆಸಬೇಕು. ಅಲ್ಲದೇ ಕಾನೂನು ಹೋರಾಟ, ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ ಈ ಎಲ್ಲಾ ಮಾಹಿತಿಗಳನ್ನು ವಿಕಿಲೀಕ್ಸ್‌ನಲ್ಲಿಯೇ ಬಟಾಬಯಲು ಮಾಡುವುದಾಗಿ ಅಸಾಂಜ್ ಘೋಷಿಸಿರುವುದಾಗಿ ಸ್ವಿಸ್ ಪತ್ರಿಕೆ ಡೆರ್ ಸೊನಾಟಾಗ್ ವರದಿ ಮಾಡಿದೆ.
WD
ಭಾರತದಲ್ಲಿ ತಳಮಳ; ವಿಕಿಲೀಕ್ಸ್ ಈಗಾಗಲೇ ಲಕ್ಷಾಂತರ ಪುಟಗಳ ಮಾಹಿತಿಯನ್ನು ಹೊರಹಾಕಿದ್ದರೂ ಕೂಡ ಭಾರತ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲವಾಗಿತ್ತು. ಆದರೆ ಈಗ 1990ರಿಂದ 2009ರವರೆಗಿನ ಸ್ವಿಸ್ ಬ್ಯಾಂಕ್ ಅಕೌಂಟ್‌ಗಳ ವಿವರ ಅಸಾಂಜ್ ಕೈಸೇರಿದೆ. ಇದರಲ್ಲಿ ಭಾರತದ ಹೆಸರಿದೆ ಎಂದು ಅಸಾಂಜ್ ಕೂಡ ಸ್ಪಷ್ಟವಾಗಿ ಹೇಳದೆ, ಏಷ್ಯಾದ ಕೆಲ ಗಣ್ಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾಗಿ ಭಾರತದ ರಾಜಕಾರಣಿ, ಉದ್ಯಮಿಗಳಲ್ಲಿ ತಳಮಳ ಹುಟ್ಟಿಸಲು ಕಾರಣವಾಗಿದೆ. ಒಂದು ಮೂಲದ ಪ್ರಕಾರ ಸುಮಾರು 50 ಮಂದಿ ಭಾರತೀಯರ ಹೆಸರು ಇದೆ ಎಂದು ಹೇಳಲಾಗುತ್ತಿದ್ದು, ಇದು ಭಾರತದ ರಾಜಕಾರಣಿಗಳು ಮತ್ತು ಉದ್ಯಮಿಗಳಲ್ಲಿ ನಡುಕ ಹುಟ್ಟಿಸಿದೆ.
ಒಂದು ವೇಳೆ ಅಸಾಂಜ್ ಸ್ವಿಸ್ ಬ್ಯಾಂಕ್ ರಹಸ್ಯ ಅಕೌಂಟ್ ದಾಖಲೆ ಹೊರಹಾಕಿ, ಅದರಲ್ಲಿ ಭಾರತೀಯ ಘಟಾನುಘಟಿಗಳ ಹೆಸರು ಬಹಿರಂಗವಾದಲ್ಲಿ ರಾಷ್ಟ್ರರಾಜಕಾರಣದಲ್ಲಿ ಭಾರೀ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರತೊಡಗಿದೆ.
ಅಡ್ವಾಣಿ, ಸುಪ್ರೀಂ ತರಾಟೆ; ಕಪ್ಪು ಹಣದ ಕುರಿತಂತೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಕೂಡ ಕೇಂದ್ರ ಸರಕಾರವನ್ನು ತರಾಟೆ ತೆಗೆದುಕೊಂಡಿತ್ತು. ರಹಸ್ಯ ಅಕೌಂಟ್ ಮಾಹಿತಿ ಬಹಿರಂಗಪಡಿಸಲು ನಿಮಗೆ ಏನು ತೊಂದರೆ ಇದೆ ಎಂದು ಸುಪ್ರೀಂ ಪ್ರಶ್ನಿಸಿತ್ತು. ಇದಕ್ಕೆ ಕೇಂದ್ರ ಭದ್ರತಾ ಕಾರಣದಿಂದ ತಮ್ಮ ಬಳಿ ಇರುವ ಮಾಹಿತಿ ಹೊರಹಾಕಲು ಅಡ್ಡಿಯಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂಗೆ ವಿವರಣೆ ನೀಡಿತ್ತು.
ಅಲ್ಲದೇ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಕೂಡ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತನ್ನಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಅಂಗೀಕರಿಸಿದ್ದ ಗೊತ್ತುವಳಿಯ ಅನ್ವಯ ಅಮೆರಿಕ ಮತ್ತು ಜರ್ಮನಿ ತಮ್ಮ ದೇಶದ ಪ್ರಜೆಗಳು ಇಟ್ಟಿದ್ದ ಕಪ್ಪು ಹಣವನ್ನು ಮರಳಿ ಪಡೆದಿದೆ. ಆದರೆ ಭಾರತ ಈ ನಡೆಗೆ ಮುಂದಾಗಿಲ್ಲ ಎಂದು ಆರೋಪಿಸಿದ್ದರು. ವಿದೇಶಿ ಬ್ಯಾಂಕ್‌ಗಳಲ್ಲಿ ಸುಮಾರು 20 ಲಕ್ಷ ಕೋಟಿ ರೂಪಾಯಿ ಹಣ ಇರುವುದಾಗಿಯೂ ದೂರಿದ್ದರು.