ಭದ್ರತಾ ಪಡೆ ನೌಕರಿಗೆ ಯಾರೂ ಕೂಡ ಅರ್ಜಿ ಗುಜರಾಯಿಸುವಂತಿಲ್ಲ ಎಂದು ಪಾಕಿಸ್ತಾನದ ಉತ್ತರ ವಜಿರಿಸ್ತಾನ್ ಬುಡಕಟ್ಟು ಪ್ರದೇಶದಲ್ಲಿನ ಜನರಿಗೆ ತಾಲಿಬಾನ್ ಬೆಂಬಲಿತ ಉಗ್ರಗಾಮಿ ಸಂಘಟನೆ ಎಚ್ಚರಿಕೆ ನೀಡಿರುವುದಾಗಿ ಬುಡಕಟ್ಟು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಕಮಾಂಡರ್ ಹಫೀಜ್ ಗುಲ್ ಬಹಾದೂರ್ ನೇತೃತ್ವದ ತಾಲಿಬಾನ್ ಸಂಘಟನೆ ಸೋಮವಾರ ಈ ಎಚ್ಚರಿಕೆಯ ಕರಪತ್ರ ಹಂಚಿರುವುದನ್ನು ತಾನು ಗಮನಿಸಿರುವುದಾಗಿ ಆ ವ್ಯಕ್ತಿ ಹೇಳಿದ್ದಾರೆ.
ಈ ಪ್ರದೇಶದಲ್ಲಿನ ಯುವಕರನ್ನು ಭದ್ರತಾ ಪಡೆಗೆ ಸೇರಿಸಿಕೊಳ್ಳುವುದು ವ್ಯವಸ್ಥಿತ ಸಂಚು ಎಂದು ಸಂಘಟನೆ ಕರಪತ್ರದಲ್ಲಿ ಎಚ್ಚರಿಸಿದೆ. ಒಂದು ವೇಳೆ ಯಾರಾದರೂ ಭದ್ರತಾ ಪಡೆಯ ಕೆಲಸಕ್ಕೆ ಅರ್ಜಿ ಹಾಕಿದರೆ ಮುಂದಾಗುವ ಅನಾಹುತಕ್ಕೆ ನೀವೇ ಹೊಣೆಗಾರರು ಎಂದು ಬೆದರಿಕೆ ಹಾಕಿರುವುದಾಗಿಯೂ ಬುಡಕಟ್ಟು ವ್ಯಕ್ತಿ ತಿಳಿಸಿರುವುದಾಗಿ ಮಾಧ್ಯಮದ ವರದಿಯೊಂದು ವಿವರಿಸಿದೆ.
ಈ ಪ್ರದೇಶದಲ್ಲಿ ಬುಡಕಟ್ಟು ಯುವಕರನ್ನು ಆರ್ಮಿ, ಅರೆಸೇನಾ ಪಡೆ ಹಾಗೂ ಭದ್ರತಾ ಪಡೆಗೆ ಸೇರಿಸಿಕೊಳ್ಳಲು ಸರಕಾರ ಯೋಜನೆ ಹಾಕಿಕೊಂಡಿರುವುದಾಗಿ ಆತ ತಿಳಿಸಿದ್ದಾನೆ.
ಉತ್ತರ ವಜಿರಿಸ್ತಾನದ ಜನರನ್ನು ಮಿಲಿಟರಿಗೆ ಸೇರ್ಪಡೆಗೊಳಿಸುವುದು ಸರಕಾರದ ಹುನ್ನಾರವಾಗಿದೆ. ಆ ನಿಟ್ಟಿನಲ್ಲಿ ಈ ಭಾಗದ ಯುವಕರು ಯಾರೂ ಅರ್ಜಿ ಹಾಕಬಾರದು ಎಂದು ಕರಪತ್ರದಲ್ಲಿ ಉಗ್ರರು ಎಚ್ಚರಿಕೆ ನೀಡಿದ್ದಾರೆ.