ಪೊಲೀಸ್ ಇಲಾಖೆ ಹುದ್ದೆಯ ಆಯ್ಕೆಗಾಗಿ ಬಂದಿದ್ದವರ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಪರಿಣಾಮ ಸುಮಾರು 50 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಹುಟ್ಟೂರಾದ ಟಿಕ್ರಿಟ್‌ನಲ್ಲಿ ಮಂಗಳವಾರ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ನೇಮಕಾತಿ ಸೆಂಟರ್‌ನ ಹೊರಭಾಗದಲ್ಲಿ ತಮ್ಮ ದಾಖಲಾತಿಯನ್ನು ಹಿಡಿದು ಕೆಲಸ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಿಂತಿದ್ದ ಸಾಲಿನ ಮೇಲೆ ಆತ್ಮಹತ್ಯಾ ಬಾಂಬರ್‌ನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ನೂರು ಮಂದಿ ಗಾಯಗೊಂಡಿದ್ದಾರೆ ಎಂದು ಸಲಾಹುದ್ದೀನ್ ಪ್ರಾಂತ್ಯದ ಸಹಾಯಕ ರಾಜ್ಯಪಾಲ ಅಹ್ಮೆದ್ ಅಬ್ದುಲ್ ಜಬ್ಬಾರ್ ವಿವರಿಸಿದ್ದಾರೆ.
ಇದು ಅಲ್ ಖಾಯಿದಾ ಸಂಘಟನೆಯ ಕೃತ್ಯವೇ ಆಗಿದೆ, ಅವರು ರಾಕ್ಷಸಿ ಮನೋಭಾವದ ಉಗ್ರರು ಎಂದು ಜಬ್ಬಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಮೃತದೇಹ ಮತ್ತು ಗಾಯಾಳುಗಳಿಂದ ತುಂಬಿ ಹೋಗಿದೆ. ಆಂಬ್ಯುಲೆನ್ಸ್ ಕೂಡ ಶವಗಳನ್ನು ಸಾಗಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.
ದಾಳಿ ನಡೆದ ಸಂದರ್ಭದಲ್ಲಿ ಲೈನ್‌ನಲ್ಲಿ ಸುಮಾರು 300 ಮಂದಿ ನಿಂತಿದ್ದರು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಸ್ಥಳದಲ್ಲಿ ರಕ್ತದ ಕೋಡಿ ಹರಿದಿದ್ದು, ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಭಯ ಹುಟ್ಟಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆಯೂ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿಯೂ ಹೇಳಿದ್ದಾರೆ.