ಶಾಲಾ ಬಸ್ ಚಾಲಕ, ಕಂಡಕ್ಟರ್ ಸೇರಿದಂತೆ ಮೂವರು ಮಂದಿ ಕಾಮುಕರು ಭಾರತೀಯ ಮೂಲದ 4ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ.
ಇಲ್ಲಿನ ಮೋಡರ್ನ್ ಹೈಸ್ಕೂಲ್ ಶಾಲೆಯ ನಾಲ್ಕರ ಹರೆಯದ ವಿದ್ಯಾರ್ಥಿನಿ ಮೇಲೆ ಶಾಲೆಯ ಮಕ್ಕಳ ದಿನಾಚರಣೆಯ ನವೆಂಬರ್ 11ರಂದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದ್ದು, ಘಟನೆ ಬಗ್ಗೆ ಪೋಷಕರು ಜನವರಿ 9ರಂದು ಪೊಲೀಸರಿಗೆ ದೂರು ನೀಡಿದ್ದರು.
ಬಸ್ ಚಾಲಕ ಶಾಲೆಯ ಉದ್ಯೋಗಿಯಾಗಿದ್ದ, ಈತ ಸುಮಾರು 14 ವರ್ಷಗಳಿಂದ ಡ್ರೈವಿಂಗ್ ವೃತ್ತಿ ಮಾಡುತ್ತಿದ್ದ. ಅಲ್ಲದೇ ಬಸ್ ಕಂಡಕ್ಟರ್ ಸೇರಿ ಮೂರು ಮಂದಿ ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ.
'ನಮ್ಮ ಮಗಳು ಗಾಬರಿಯಿಂದ ರಾತ್ರಿ ನಿದ್ದೆ ಮಾಡುತ್ತಿರಲಿಲ್ಲ. ಆದರೆ ಈ ಬಾಲಕಿ ಏನು ನಡೆಯಿತು ಎಂಬ ವಿಷಯವನ್ನು ಪೋಷಕರಿಗೆ ತಿಳಿಸಿರಲಿಲ್ಲವಾಗಿತ್ತು. ಆದರೆ ಮಗುವಿನ ಬಟ್ಟೆಯ ಮೇಲಿನ ಕಲೆ ಗಮನಿಸಿದ ಮೇಲೆ ಸಂಶಯ ಮೂಡಿಸಿತ್ತು ಎಂದು ತಾಯಿ ತಿಳಿಸಿರುವುದಾಗಿ ವರದಿ ಮಾಡಿದೆ.
ಘಟನೆಯಿಂದ ಹೆದರಿ ಕಂಗಾಲಾಗಿದ್ದ ಮಗು ಶಾಲೆಗೆ ಹೋಗುವುದನ್ನು ನಿಲ್ಲಿಸಿತ್ತು. ಅಂತೂ ಕೊನೆಗೂ ವೈದ್ಯರ ಬಳಿ ತಪಾಸಣೆ ನಡೆಸಿದ ನಂತರ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆ ತಿಳಿಯಿತು ಎಂದು ಮಗುವಿನ ತಾಯಿ ವಿವರಿಸಿದ್ದಾರೆ. ಘಟನೆಯಿಂದಾಗಿ ತಮ್ಮ ಮಗುವಿನ ಪ್ರಾಣಕ್ಕೆ ಅಪಾಯವಾಗಬಹುದು ಎಂದು ಪೋಷಕರು ಭಾರತಕ್ಕೆ ವಾಪಸಾಗಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ದುಬೈ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಕೂಡ ತಮಗೆ ಬೆಂಬಲ ನೀಡಿದೆ. ನಾವು ಶಾಲಾ ಆಡಳಿತ ಮಂಡಳಿಯ ಮೇಲೆ ಗೂಬೆ ಕೂರಿಸುವುದಿಲ್ಲ. ಈ ಕೃತ್ಯ ಎಸಗಿದ ಕಾಮುಕರಿಗೆ ಮಾತ್ರ ಶಿಕ್ಷೆಯಾಗಬೇಕು ಎಂಬುದೇ ತಮ್ಮ ನಿಲುವು ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.