ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವೆಹಾರಿ ಗ್ರಾಮದ ಭೂಮಾಲೀಕನೊಬ್ಬನ ಕಾಮತೃಷೆ ಈಡೇರಿಸಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಊರಲ್ಲಿ ನಗ್ನ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಸ್ಥಳೀಯ ನಿವಾಸಿಗಳ ಹೇಳಿಕೆ ಪ್ರಕಾರ, ಬಾಲಕಿಯೊಬ್ಬಳೆ ಮನೆಯಲ್ಲಿದ್ದ ವೇಳೆ ಇಜಾಜ್ ಅಹ್ಮದ್ (ಭೂ ಮಾಲೀಕ), ಬಿಲಾಲ್, ಶೆಹ್ಬಾಜ್, ಮುಝಾಮ್ ಹಾಗೂ ತಾಹೀರ್ ಸೇರಿದಂತೆ ಐವರು ಕಾಮುಕರು ಒಳನುಗ್ಗಿ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾರೆ.
ಘಟನೆ ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ತನಗೂ ಮತ್ತು ತಂಗಿಗೆ ಬೆದರಿಕೆಯೊಡ್ಡಿರುವುದಾಗಿ ಯುವತಿಯ ಅಣ್ಣ ದಿ ಎಕ್ಸ್ಪ್ರೆಸ್ ಟ್ರೈಬ್ಯೂನ್ ಪತ್ರಿಗೆ ತಿಳಿಸಿದ್ದಾನೆ. ಬಾಲಕಿಯ ಪೋಷಕರು ಕೆಲ ವರ್ಷಗಳ ಹಿಂದೆಯೇ ತೀರಿಹೋಗಿದ್ದರು. ಈಗ ಬಾಲಕಿ ಮತ್ತು ಆಕೆಯ ಅಣ್ಣ ಅಜ್ಜ ಮತ್ತು ಚಿಕ್ಕಪ್ಪನ ಜತೆ ವಾಸಿಸುತ್ತಿದ್ದರು.
ಭೂಮಾಲೀಕ ಅಹ್ಮದ್ ಹಲವು ಬಾರಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದ ಆದರೆ ತಾನು ತಿರಸ್ಕರಿಸಿರುವುದಾಗಿ ಬಾಲಕಿ ಹೇಳಿದ್ದಾಳೆ. ಆಗ ನನ್ನನ್ನು ಮತ್ತು ಅಣ್ಣನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಏತನ್ಮಧ್ಯೆ ತನ್ನ ಅಣ್ಣ ಕೆಲಸಕ್ಕೆ ಹೋಗಿದ್ದ ಸಮಯ ಗಮನಿಸಿ ಜ.15ರ ರಾತ್ರಿ ಐವರು ಮನೆಯೊಳಗೆ ನುಗ್ಗಿ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾಳೆ.
ಈ ಬಾಲಕಿ ತನ್ನ ಸೊತ್ತು ಎಂದು ಹೇಳಿಕೊಂಡ ಇಜಾಜ್ ಅಹ್ಮದ್ ಎಂಬ ಭೂಮಾಲೀಕ ತನ್ನ ಸಹಚರರ ಜತೆಗೆ ಬಂದು ವಯೋವೃದ್ಧ ಅಜ್ಜ ಮತ್ತು ಮಾವನನ್ನು ಗಾಯಗೊಳಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ. ಇಷ್ಟಕ್ಕೇ ನಿಲ್ಲದೆ ಊರಲ್ಲಿ ನಗ್ನ ಮೆರವಣಿಗೆ ಮಾಡಲಾಯಿತು ಎಂದು ಬಾಲಕಿಯ ಸಹೋದರನ ಹೇಳಿಕೆ ಉಲ್ಲೇಖಿಸಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ದೈನಿಕ ವರದಿ ಮಾಡಿದೆ.
ಮೆರವಣಿಗೆ ಮಾಡುವ ಸಂದರ್ಭದಲ್ಲಿ ಯಾರೊಬ್ಬರೂ ಉಸಿರೆತ್ತಿಲ್ಲ, ಯಾಕೆಂದರೆ ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಇದೀಗ ಘಟನೆ ಬಗ್ಗೆ ಬಾಲಕಿ ಅಣ್ಣ ಮಾಚಿವಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆದರೆ ಆರಂಭದಲ್ಲಿ ದೂರು ದಾಖಲಿಸಲು ಪೊಲೀಸರು ಕೂಡ ನಿರಾಕರಿಸಿದ್ದರು ನಂತರ ಮೊಕದ್ದಮೆ ದಾಖಲಿಸಿಕೊಂಡಿರುವುದಾಗಿ ಬಾಲಕಿಯ ಅಣ್ಣ ತಿಳಿಸಿದ್ದಾನೆ.