ಇಟಲಿಯಲ್ಲಿ ವಿವಾದ ಹುಟ್ಟು ಹಾಕಿದ ಪ್ರಧಾನಿ ಸೆಕ್ಸ್ ಸ್ಕ್ಯಾಂಡಲ್!
ರೋಮ್, ಬುಧವಾರ, 19 ಜನವರಿ 2011( 14:39 IST )
ರಾಜ್ಯರಾಜಕಾರಣದಲ್ಲಿ ಹಾಲಪ್ಪ ಅತ್ಯಾಚಾರ ಪುರಾಣ ಸಾಕಷ್ಟು ವಿವಾದ ಸೃಷ್ಟಿಸಿ ಇದೀಗ ತಣ್ಣಗಾಗಿದೆ. ಆದರೆ ಇಟಲಿಯ 74ರ ಹರೆಯದ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ರಾಸಲೀಲೆಯ ರೋಚಕ ಸಂಗತಿಗಳು ಬಟಾ ಬಯಲಾಗತೊಡಗಿರುವುದು ಇರಿಸುಮುರಿಸಿಗೆ ಕಾರಣವಾಗಿದೆ.
ಬೆರ್ಲುಸ್ಕೋನಿ ಅವರು ಲೈಂಗಿಕ ಸಂಪರ್ಕ ನಡೆಸಿರುವುದು 17 ವರ್ಷದ ಮೊರಾಕ್ಕೋದ ಯುವತಿಯ ಜತೆಗೆ, ಇದು ಕೇವಲ ಒಂದು ಉದಾಹರಣೆಯಷ್ಟೇ. ಯಾಕೆಂದರೆ ಬೆರ್ಲುಸ್ಕೋನಿ ಹಲವು ವೇಶ್ಯೆಯರ ಜತೆ ಅನೈತಿಕ ಸಂಪರ್ಕ ಇಟ್ಟುಕೊಂಡಿದ್ದರು.
ತನ್ನ ದೈಹಿಕ ಇಚ್ಛೆ ಪೂರ್ತಿಗೊಂಡ ನಂತರ ಪ್ರಧಾನಿ ಸಿಲ್ವಿಯೋ ಅವರು ಕೈತುಂಬಾ ಹಣ, ಜತೆಗೆ ಫ್ಲ್ಯಾಟ್‌ಗಳನ್ನು ಧಾರಾಳವಾಗಿ ನೀಡಿರುವ ಅಂಶ ಕೂಡ ಹೊರಬೀಳತೊಡಗಿದೆ. ಮಿಲಾನ್ ಬಳಿ ಇರುವ ಇವರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳಲ್ಲಿ ಇಂತಗ ಕಾಮಕೇಳಿ ಕೂಟ, ನೃತ್ಯಗಳು ನಡೆಯುತ್ತಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.
74ರ ಬೆರ್ಲುಸ್ಕೋನಿ ಅವರ ರಾಸಲೀಲೆಯ ವಿವರಗಳನ್ನು ಪಿರ್ಯಾದುದಾರರು ಬಯಲು ಮಾಡಿದ್ದರು. ಇವರ ಎಲ್ಲ ಲೈಂಗಿಕ ಚಟುವಟಿಕೆಗಳ 400 ಪುಟಗಳ ದಾಖಲಾತಿ ಸಂಸತ್‌ಗೂ ತಲುಪಿದೆ. ಈ ಸಂಬಂಧ ತನಿಖೆ ನಡೆಸಲು ಅವರು ಚೇಂಬರ್ ಆಫ್ ಡೆಫ್ಯುಟೀಸ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಏತನ್ಮಧ್ಯೆ ಬೆರ್ಲುಸ್ಕೋನಿ ಅವರ ವೇಶ್ಯಾವಾಟಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ ಎಂದು ವರದಿಯೊಂದು ತಿಳಿಸಿತ್ತಾದರೂ ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಯಾಕೆಂದರೆ ಇಟಲಿಯಲ್ಲಿ ವೇಶ್ಯಾವಾಟಿಕೆ ಅಪರಾಧವಲ್ಲ. ಹಾಗಾಗಿ ಪ್ರಧಾನಿ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಕಾನೂನು ತೊಡಕು ಕೂಡ ಇದೆ. ಅವರು ಚೇಂಬರ್ ಆಫ್ ಡೆಫ್ಯುಟೀಸ್ ಸದಸ್ಯರೂ ಆಗಿರುವುದರಿಂದ ಅವರಿಗೆ ಕಾನೂನಿನ ರಕ್ಷಣೆಯೂ ಇದೆ.
ದೇಶದ ಗೌರವಕ್ಕೆ ಧಕ್ಕೆ; ದೇಶದ ಉನ್ನತ ಅಧಿಕಾರದಲ್ಲಿರುವ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ವೇಶ್ಯೆಯರ ಜತೆ ಲೈಂಗಿಕ ಸಂಪರ್ಕ ಹೊಂದಿರುವುದು ಮತ್ತು ಆ ಬಗ್ಗೆ ತನಿಖೆ ಒಳಗಾಗಿರುವುದು ದೇಶದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಇಟಲಿಯ ಪ್ರಭಾವಿ ಕ್ಯಾಥೋಲಿಕ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
ದೇಶದ ಉನ್ನತ ಮಟ್ಟದ ಅಧಿಕಾರದಲ್ಲಿ ಕುಳಿತ ವ್ಯಕ್ತಿ ಅಪ್ರಾಪ್ತ ಬಾಲಕಿ ಜತೆ ರಾಸಲೀಲೆಯಲ್ಲಿ ತೊಡಗುವುದು ಇದು ನಿಜಕ್ಕೂ ದೇಶದ ಕೀರ್ತಿಗೆ ಕಳಂಕ ಎಂದು ಅವ್ವೆನಿಯರ್ ಪತ್ರಿಕೆ ಹೇಳಿದೆ. ಇದೀಗ ಮೊರಾಕ್ಕೋದ ಬಾಲಕಿ ಜತೆ ನಡೆಸಿದ ರಾಸಲೀಲೆಗೆ ಕೋಟ್ಯಂತರ ರೂಪಾಯಿ ನೀಡಿರುವ ಆರೋಪದ ಬಗ್ಗೆ ಮಿಲಾನ್ ಪ್ರಾಸಿಕ್ಯೂಟರ್ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಪ್ರಧಾನಿ ಸಿಲ್ವಿಯೋ ಕಾಮಪುರಾಣ ಇಟಲಿಯಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿದೆ.