ಅಫ್ಘಾನ್ ತಾಲಿಬಾನ್ ಮುಖಂಡ ಒಕ್ಕಣ್ಣ ಮುಲ್ಲಾ ಓಮರ್‌ಗೆ ಲಘು ಹೃದಯಾಘಾತವಾಗಿದ್ದು, ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಿದ್ದು,ಆತನಿಗೆ ಪಾಕಿಸ್ತಾನದ ಪ್ರಭಾವಿ ಗುಪ್ತಚರ ಇಲಾಖೆ ಐಎಸ್ಐ ಸಂಪೂರ್ಣ ಸಹಾಯ ನೀಡಿರುವ ಅಂಶ ಬಯಲಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ತಾಲಿಬಾನ್ ಮುಖಂಡ ಮುಲ್ಲಾಗೆ ಜನವರಿ 7ರಂದು ಹಾರ್ಟ್ ಅಟ್ಯಾಕ್ ಆಗಿತ್ತು. ಕೂಡಲೇ ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಪಾಕಿಸ್ತಾನದ ಐಎಸ್ಐ ಪೂರ್ಣ ನೆರವಿನೊಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿ ವಿವರಿಸಿದೆ.
ಖಾಸಗಿ ಗುಪ್ತಚರರ ಮಾಹಿತಿಯ ಮೇರೆಗೆ ಈ ವರದಿ ಮಾಡಲಾಗಿದೆ ಎಂದು ಪತ್ರಿಕೆ ಹೇಳಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಮುಲ್ಲಾನನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿರುವುದನ್ನು ತಾನು ನೋಡಿರುವುದಾಗಿ ವೈದ್ಯರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
ಆದರೆ ತಾನು ವೈಯಕ್ತಿಕವಾಗಿ ಆಪರೇಷನ್ ಥಿಯೇಟರ್ ಒಳಗೆ ಹೋಗಿಲ್ಲ. ಆದರೆ ಮುಲ್ಲಾ ಓಮರ್‌ನನ್ನು ತಾನು ಆಸ್ಪತ್ರೆಯಲ್ಲಿ ನೋಡಿರುವುದಾಗಿ ಅವರು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಸುದ್ದಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.