ಡೇರಾ ಘಾಜಿ ಖಾನ್, ಬುಧವಾರ, 19 ಜನವರಿ 2011( 17:52 IST )
ವಿವಾದಿತ ಧಾರ್ಮಿಕ ನಿಂದನಾ ಕಾಯ್ದೆಗೆ ತಿದ್ದುಪಡಿ ತರುವ ಯಾವುದೇ ಯೋಜನೆಯನ್ನು ಪಾಕಿಸ್ತಾನ ಸರಕಾರ ಕೈಗೊಂಡಿಲ್ಲ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಸ್ಪಷ್ಟಪಡಿಸಿದ್ದಾರೆ.
ಇಂತಹ ಸೂಕ್ಷ್ಮ ವಿಚಾರಗಳ ವಿಚಾರದಲ್ಲಿ ಸರಕಾರ ಆತುರದ ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ ಎಂಬುದಾಗಿ ಅಲ್ಲಾಮಾ ಇಕ್ಬಾಲ್ ಒಪನ್ ಯೂನಿರ್ವಸಿಟಿ ಹಾಗೂ ಬಾಹುದ್ದೀನ್ ಜಾಕ್ರಿಯಾ ಯೂನಿರ್ವಸಿಟಿಯ ಸಬ್ ಕ್ಯಾಂಪಸ್ ಅನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಈ ರೀತಿಯಾಗಿ ಹೇಳಿರುವುದಾಗಿ ಡೈಲಿ ಟೈಮ್ಸ್ ವರದಿ ಮಾಡಿದೆ.
ಆ ನಿಟ್ಟಿನಲ್ಲಿ ಧಾರ್ಮಿಕ ನಿಂದನಾ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ ಎಂಬ ದೃಢ ವಿಶ್ವಾಸ ಪಾಕ್ ಸರಕಾರ ಹೊಂದಿರುವುದಾಗಿ ಹೇಳಿದರು. ದೇಶದಲ್ಲಿನ ಧಾರ್ಮಿಕ ನಿಂದನಾ ಕಾಯ್ದೆಗೆ ಆಡಳಿತಾರೂಢ ಪಿಪಿಪಿ ನೇತೃತ್ವದ ಮೈತ್ರಿಕೂಟದ ಸರಕಾರ ತಿದ್ದುಪಡಿ ತರಲು ಮುಂದಾಗಿದೆ ಎಂಬ ಸುದ್ದಿಗೆ ಪಾಕಿಸ್ತಾನದಲ್ಲಿ ಕಟ್ಟರ್ ಮುಸ್ಲಿಮ್‌ವಾದಿ ತೀವ್ರ ವಿರೋಧ ವ್ಯಕ್ತಪಡಿಸಿ, ಮೆರವಣಿಗೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ನಾನು ಯಾವತ್ತೂ ಧಾರ್ಮಿಕ ನಿಂದನಾ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಆಲೋಚಿಸಿಯೇ ಇಲ್ಲ ಎಂದು ಗಿಲಾನಿ ಹೇಳಿದರು. ಆದರೆ ಈ ಬಗ್ಗೆ ಚರ್ಚಿಸಲು ಪಕ್ಷದ ವತಿಯಿಂದ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿ ಕೂಡ ಧಾರ್ಮಿಕ ನಿಂದನಾ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಿದರು.