ಕುರಾನ್ ವಿರೋಧಿ ಅಮೆರಿಕದ ಪಾದ್ರಿಗೆ ಬ್ರಿಟನ್ ಪ್ರವೇಶಕ್ಕೆ ನಿಷೇಧ
ಲಂಡನ್, ಗುರುವಾರ, 20 ಜನವರಿ 2011( 15:14 IST )
ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಕುರಾನ್ ಸುಡುವುದಾಗಿ ಘೋಷಿಸಿ ಜಾಗತಿಕ ಮಟ್ಟದಲ್ಲಿ ಟೀಕೆಗೊಳಗಾಗಿದ್ದ ಅಮೆರಿಕದ ಫೈಯರ್ ಬ್ರಾಂಡ್ ಪಾದ್ರಿ ಟೆರ್ರೈ ಜೋನ್ಸ್ ಬ್ರಿಟನ್‌ಗೆ ಕಾಲಿಡದಂತೆ ನಿರ್ಬಂಧ ಹೇರಿದೆ.
ಬ್ರಿಟನ್ ಸರಕಾರ ಎಲ್ಲಾ ರೀತಿ ತೀವ್ರಗಾಮಿತನವನ್ನು ಬಲವಾಗಿ ವಿರೋಧಿಸುತ್ತದೆ. ಹಾಗಾಗಿ ನಾವು ಪಾದ್ರಿ ಟೆರ್ರೈ ಜೋನ್ಸ್ ಅವರನ್ನು ಕೂಡ ಇದರಿಂದ ಹೊರತುಪಡಿಸಲು ಸಾಧ್ಯವಿಲ್ಲ ಎಂದು ಆಂತರಿಕ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಕಳೆದ ವರ್ಷ ಪಾದ್ರಿ ಜೋನ್ಸ್ ಅವರು ಅಮೆರಿದಲ್ಲಿ 2001 ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದನಾ ದಾಳಿ ಘಟನೆಯ ವಾರ್ಷಿಕೋತ್ಸವ ಅಂಗವಾಗಿ ಕುರಾನ್ ಅನ್ನು ಸುಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿ, ಜಾಗತಿಕ ಮಟ್ಟದಲ್ಲಿ ಕರೆ ನೀಡಿದ್ದರು. ಇದೀಗ ಈ ನಿಷೇಧದಿಂದಾಗಿ ತಾನು ತುಂಬಾ ನಿರಾಸೆಗೊಂಡಿರುವುದಾಗಿ ಪಾದ್ರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಾವು ನಿಜಕ್ಕೂ ತುಂಬಾ ನಿರಾಸೆಗೊಂಡಿದ್ದೇವೆ. ಆ ನಿಟ್ಟಿನಲ್ಲಿ ಬ್ರಿಟನ್ ಪ್ರವೇಶಕ್ಕೆ ಹೇರಿದ್ದ ನಿಷೇಧವನ್ನು ರದ್ದುಗೊಳಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ಸ್ಕೈ ನ್ಯೂಸ್ ಟೆಲಿವಿಷನ್‌ಗೆ ಜೋನ್ಸ್ ತಿಳಿಸಿದ್ದಾರೆ.
ಉತ್ತರ ಲಂಡನ್‌ನ ಲೂಟನ್ ನಗರದಲ್ಲಿ ಫೆಬ್ರುವರಿ 5ರಂದು ಬಲಪಂಥೀಯ ಸಂಘಟನೆಯಾದ ಇಂಗ್ಲಿಷ್ ಡಿಫೆನ್ಸ್ ಲೀಗ್(ಇಡಿಎಲ್) ಸಮಾರಂಭವೊಂದನ್ನು ಹಮ್ಮಿಕೊಂಡಿದ್ದು, ಅದಕ್ಕೆ ಪಾದ್ರಿ ಜೋನ್ಸ್ ಅವರನ್ನು ಆಹ್ವಾನಿಸಿತ್ತು.