ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ 2009ರಲ್ಲಿ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರರನ್ನು ಒತ್ತೆಯಾಳನ್ನಾಗಿ ಮಾಡಿಕೊಂಡು ಸಂಘಟನೆಯ ಕೆಲವು ಸದಸ್ಯರನ್ನು ಬಂಧಮುಕ್ತಗೊಳಿಸಿಕೊಳ್ಳುವ ಯೋಜನೆಯನ್ನು ಲಷ್ಕರ್ ಇ ಜಾಂಘ್ವಿ ರೂಪಿಸಿತ್ತು ಎಂದು ಬಂಧಿತ ಪ್ರಮುಖ ಉಗ್ರನೊಬ್ಬ ಬಾಯ್ಬಿಟ್ಟಿದ್ದಾನೆ.
ಅಬ್ದುಲ್ ವಾಹಬ್ ಅಲಿಯಾಸ್ ಓಮರ್ ಎಂಬಾತ ಬಂಧಿತ ಉಗ್ರನಾಗಿದ್ದಾನೆ ಎಂದು ತಿಳಿಸಿರುವ ಜಿಯೋ ನ್ಯೂಸ್, 2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಾಳಿ ನಡೆಸಿ ಅವರನ್ನು ವಜಿರಿಸ್ತಾನಕ್ಕೆ ಕರೆದೊಯ್ಯುವ ಸಂಚು ರೂಪಿಸಿರುವುದಾಗಿ ಓಮರ್ ತಿಳಿಸಿರುವುದಾಗಿ ವರದಿ ಹೇಳಿದೆ.
ಲಷ್ಕರ್ ಇ ಜಾಂಘ್ವಿಯ ಅಮ್‌ಜಾದ್ ಫಾರೂಕಿ ಸಂಘಟನೆ ಆಟಗಾರರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡು ಸರಕಾರದ ಜತೆ ಡೀಲ್ ಕುದುರಿಸಿ ಸಂಘಟನೆಯ ಕೆಲವು ಸದಸ್ಯರನ್ನು ಬಿಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿತ್ತು ಎಂದು ಆತ ತಿಳಿಸಿದ್ದಾನೆ.
ಆಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿಯೇ ನಾವು ರಿಕ್ಷಾ ಮತ್ತು ಬೈಕ್ ಅನ್ನು ಖರೀದಿಸಿದ್ದೇವೆ ಎಂದು ವಿವರಿಸಿರುವ ವಾಹಬ್, ತಾನು ವಜಿರಿಸ್ತಾನದಲ್ಲಿ ತರಬೇತಿ ಪಡೆದುಕೊಂಡಿರುವುದಾಗಿಯೂ ಹೇಳಿದ್ದಾನೆ. ಈ ಸಂದರ್ಭದಲ್ಲಿನ ದಾಳಿಯಲ್ಲಿ ಶ್ರೀಲಂಕಾ ತಂಡದ ಐವರು ಆಟಗಾರರು ಗಾಯಗೊಂಡಿದ್ದರು. ಅಲ್ಲದೇ ಆರು ಮಂದಿ ಪಾಕ್ ಪೊಲೀಸರು ಹಾಗೂ ವ್ಯಾನ್ ಚಾಲಕ ಸಾವನ್ನಪ್ಪಿದರು.
ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪೊಲೀಸರು ಹಲವರನ್ನು ಬಂಧಿಸಿದ್ದರು. ಆದರೆ ದಾಳಿ ನಡೆಸಿದ ಕೂಡಲೇ ವಾಹಬ್ ವಜಿರಿಸ್ತಾನಕ್ಕೆ ಪರಾರಿಯಾಗಿದ್ದ. ನಂತರ ಈತನನ್ನೂ ಪೊಲೀಸರು ಸೆರೆ ಹಿಡಿದಿದ್ದರು.