ಜೋಹಾನ್ಸ್ಬರ್ಗ್, ಶುಕ್ರವಾರ, 21 ಜನವರಿ 2011( 16:11 IST )
ಚಿಂಪಾಂಚಿ ಮತ್ತು ಗೊರಿಲ್ಲಾಗಳ ತಲೆಗಳನ್ನು ಸಾಗಿಸುತ್ತಿದ್ದ ಐದು ಮಂದಿಯನ್ನು ಸೆಂಟ್ರಲ್ ಆಫ್ರಿಕಾ ಅಧಿಕಾರಿಗಳು ಸೆರೆ ಹಿಡಿದಿರುವುದಾಗಿ ವನ್ಯಜೀವಿ ರಕ್ಷಣಾ ಸಂಘಟನೆ ತಿಳಿಸಿದೆ.
ಅಧಿಕಾರಿಗಳು ಚಿಂಪಾಂಚಿಯ 12 ತಲೆಗಳು ಹಾಗೂ ಗೊರಿಲ್ಲಾ ತಲೆಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿರುವುದಾಗಿ ಡಬ್ಲ್ಯುಡಬ್ಲ್ಯುಎಫ್ ವಿವರಿಸಿದೆ. ಇದೊಂದು ಅತ್ಯಂತ ದೊಡ್ಡ ಪ್ರಕರಣವಾಗಿದೆ. ಕಳೆದ ಒಂದು ದಶಕದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಗೊರಿಲ್ಲಾ ಮತ್ತು ಚಿಂಪಾಂಚಿಗಳ ತಲೆ, ಅಂಗಾಂಗಗಳನ್ನು ವಶಪಡಿಸಿಕೊಂಡ ಪ್ರಕರಣ ನಡೆದಿಲ್ಲ ಎಂದು ಡಬ್ಲ್ಯುಡಬ್ಲ್ಯುಎಫ್‌ನ ಮ್ಯಾನೇಜರ್ ಡೇವಿಡ್ ಗ್ರೀರ್ ವಿವರಿಸಿದ್ದಾರೆ.
ಅಲ್ಲದೇ ಅಧಿಕಾರಿಗಳು ಚಿಂಪಾಂಚಿಯ 30 ಕೈಗಳು, ಆನೆ ಹಾಗೂ ಸಿಂಹಗಳ ವಿವಿಧ ಅಂಗಾಂಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಣಕಾಸಿನ ತೊಂದರೆಯಿಂದ ಬಳಲುತ್ತಿರುವ ಇಲ್ಲಿನ ನಿವಾಸಿಗಳು ಈ ರೀತಿ ಪ್ರಾಣಿಗಳನ್ನು ಕೊಂದು ಅವುಗಳ ಅಂಗಾಂಗಗಳನ್ನು ಮಾರಾಟ ಮಾಡುವ ಪ್ರವೃತ್ತಿ ಸೆಂಟ್ರಲ್ ಮತ್ತು ಪೂರ್ವ ಆಫ್ರಿಕಾದಲ್ಲಿ ಹೆಚ್ಚಳವಾಗುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.