ಪಾಕಿಸ್ತಾನ ಭಾರತದಿಂದ ಕೆಲವೊಂದು ಪಾಠವನ್ನು ಕಲಿತುಕೊಳ್ಳಬೇಕಾಗಿದೆ. ಸೇನಾ ಸಿಬ್ಬಂದಿ ಕ್ಯಾಂಟೀನ್‌ಗೆ ಸರಬರಾಜು ಆಗುತ್ತಿದ್ದ ಪಡಿತರ ವ್ಯವಸ್ಥೆಯಲ್ಲಿನ ಲೋಪದ ಕುರಿತು ಭಾರತದ ಆರ್ಮಿ ವರಿಷ್ಠ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದೆ ಹಾಜರಾಗಿರುವ ಉದಾಹರಣೆಯನ್ನು ನೀಡುವ ಮೂಲಕ ಭಾರತದಲ್ಲಿನ ತನಿಖಾ ವ್ಯವಸ್ಥೆ ಬಗ್ಗೆ ಪಾಕ್ ವಿರೋಧ ಪಕ್ಷದ ಮುಖಂಡ ಚೌಧರಿ ನಿಸಾರ್ ಅಲಿ ಖಾನ್ ಈ ರೀತಿ ಶ್ಲಾಘಿಸಿದ್ದಾರೆ.
ನಿಜಕ್ಕೂ ನಾವು ಕೆಲವೊಂದು ಪಾಠವನ್ನು ಭಾರತದಿಂದ ಕಲಿತುಕೊಳ್ಳಬೇಕು. ಪಡಿತರ ಸರಬರಾಜಿನಲ್ಲಿನ ದೋಷದಂತಹ ಸಣ್ಣ ಪ್ರಕರಣದಲ್ಲಿಯೂ ಆರ್ಮಿ ವರಿಷ್ಠ ಪಿಎಸಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾರೆ ಎಂದು ಪಿಎಂಎಲ್-ಎನ್ ಹಿರಿಯ ಮುಖಂಡ ತಿಳಿಸಿದ್ದಾರೆ.
ಅಲಿ ಖಾನ್ ಅವರು ಪಾಕಿಸ್ತಾನದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದು, ಶುಕ್ರವಾರ ಆಯೋಗದ ಸಭೆಯಲ್ಲಿ ಅವರು ಮಾತನಾಡುತ್ತ ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಫೆನ್ಸ್ ಹೌಸಿಂಗ್ ಅಥೋರಿಟಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ಆಡಿಟ್ ಕುರಿತಂತೆ ಖಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ತಮ್ಮನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ರಕ್ಷಣಾ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಅತಾರ್ ಅಲಿ ಅವರು ಟೀಕಿಸಿದ್ದನ್ನು ಖಂಡಿಸಿ ಖಾನ್ ಈ ರೀತಿಯಾಗಿ ತಿಳಿಸಿದ್ದಾರೆ.