ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಬ್ಯಾಂಕ್ ದರೋಡೆ ಮಾಡಿರುವ ಪ್ರಕರಣ ನಡೆದಿರುವುದಾಗಿ ಆಸ್ಟ್ರೀಯನ್ ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರೀಯಾದ ಹ್ಯಾಂಡರ್‌ಬರ್ಗ್ ನಗರದಲ್ಲಿನ ಬ್ಯಾಂಕ್ ಸಂಜೆ ಮುಚ್ಚುವ ವೇಳೆಯಲ್ಲಿ ಏಕಾಏಕಿ ಒಳನುಗ್ಗಿದ ಮುಖವಾಡ ಧರಿಸಿದ ವ್ಯಕ್ತಿ ಬ್ಯಾಂಕ್ ದರೋಡೆ ಮಾಡಿರುವುದಾಗಿ ಪೊಲೀಸರು ಹೇಳಿಕೆಯಲ್ಲಿ ವಿವರಿಸಿದ್ದಾರೆ. ಇದೇ ವ್ಯಕ್ತಿ ಎರಡು ವರ್ಷಗಳ ಹಿಂದೆಯೂ ಒಬಾಮಾ ಮುಖವಾಡ ಧರಿಸಿ ಬ್ಯಾಂಕ್ ದರೋಡೆ ನಡೆಸಿರುವುದಾಗಿಯೂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಒಳಕ್ಕೆ ನುಗ್ಗಿದ ವ್ಯಕ್ತಿ ಗನ್ ಮೂಲಕ ನೌಕರರನ್ನು ಹೆದರಿಸಿ ಹಣವನ್ನು ಕೊಡುವಂತೆ ಹೇಳಿದ್ದ, ನಂತರ ಹಣವನ್ನು ಕಪ್ಪು ಬಣ್ಣದ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಕಡು ಕಪ್ಪು ಬಣ್ಣದ ಕಾರಿನಲ್ಲಿ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ.
ಕಡು ಕಪ್ಪು ಬಣ್ಣದ ಕಾರು ಸಾಲ್ಜ್‌ಬರ್ಗ್ ಪ್ರದೇಶದ ನಂಬರ್ ಪ್ಲೇಟ್ ಹೊಂದಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಆದರೆ ದರೋಡೆ ವೇಳೆ ವ್ಯಕ್ತಿ ಯಾರಿಗೂ ಹಾನಿ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ ಬ್ಯಾಂಕ್‌ನಿಂದ ಆತ ಎಷ್ಟು ಪ್ರಮಾಣದ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂಬ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿಗಳಾಗಲಿ, ಪೊಲೀಸರು ನೀಡಿಲ್ಲ. ಆದರೆ ದಿನಪತ್ರಿಕೆಯೊಂದು ದರೋಡೆಕೋರ ಸುಮಾರು 13,500 ಡಾಲರ್ ಮೊತ್ತವನ್ನು ಕದ್ದೊಯ್ದಿರುವುದಾಗಿ ತನ್ನ ಆನ್‌ಲೈನ್ ಎಡಿಷನ್‌ನಲ್ಲಿ ವರದಿ ಮಾಡಿದೆ.