ಮನೆಗೆ ಸ್ವಲ್ಪ ಬೇಗ ತೆರಳುವ ಉದ್ದೇಶದಿಂದ ಮಾಲೀಕನ ಅನುಮತಿ ಇಲ್ಲದೆ ಜಮೀನಿನ ಮೂಲಕ ಹೋಗುತ್ತಿದ್ದ ಮಹಿಳೆಯನ್ನು ಥಳಿಸಿ, ಕಿರುಕುಳ ನೀಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಕುಕುಸ್ ಗ್ರಾಮದ ನಿವಾಸಿಯಾಗಿರುವ ನಾಸ್ರೀನ್ ಎಲಾಹಿ ಅವರ ಸಣ್ಣ ಜಮೀನೊಂದು ಉಚ್ ಶರೀಫ್ ಸಮೀಪ ಇದ್ದಿದ್ದು, ಆಕೆ ತನ್ನ ಜಮೀನಿನಲ್ಲಿ ಕೆಲಸ ಮಾಡಿದ ನಂತರ ಬೇಗ ಮನೆಗೆ ಹೋಗುವ ನಿಟ್ಟಿನಲ್ಲಿ ನೆರೆಯ ಜಮೀನಿನ ಮೂಲಕ ಹೊರಡಲು ನಿರ್ಧರಿಸಿದ್ದರು. ಆದರೆ ಆ ಸಂದರ್ಭದಲ್ಲಿಯೇ ಆಕೆಯ ಮೇಲೆ ದಾಳಿ ನಡೆದಿತ್ತು.
ನಾಸ್ರೀನ್ ಅವರನ್ನು ಕೋಲಿನಿಂದ ಹೊಡೆದು, ಕುಡುಗೋಲಿನಿಂದ ಹಲ್ಲೆ ನಡೆಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ತಾನು ನನ್ನ ಜಮೀನಿನ ಪಕ್ಕದಲ್ಲಿಯೇ ಇರುವ ಮತ್ತೊಬ್ಬ ಭೂ ಮಾಲೀಕರ ಜಮೀನಿನ ಮೂಲಕ ತೆರಳುತ್ತಿದ್ದಂತೆಯೇ ನಾಲ್ಕು ಮಂದಿ ತನ್ನ ಮೇಲೆ ದಾಳಿ ನಡೆಸಿರುವುದಾಗಿ ನಾಸ್ರೀನ್ ತಿಳಿಸಿದ್ದಾರೆ.
ಘಟನೆ ನಂತರ ಏನಾಯಿತು ಎಂದು ಎಂಬುದು ತನಗೆ ತಿಳಿಯಲಿಲ್ಲ. ಸ್ಥಳೀಯರು ತನ್ನನ್ನು ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಯೇ ತಾನು ಕಣ್ಣು ಬಿಟ್ಟಿರುವುದಾಗಿ ನಾಸ್ರೀನ್ ತಿಳಿಸಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಆ ಜಮೀನು ಸ್ಥಳೀಯ ಭೂಮಾಲೀಕ ಸಲೀಂ ಎಂಬವರಿಗೆ ಸೇರಿದ್ದಾಗಿದೆ. ಇದೀಗ ಸಲೀಂ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.