ಯುವಕನೊಬ್ಬನನ್ನು ಪ್ರೀತಿಸಿದ ಏಕೈಕ ಕಾರಣಕ್ಕೆ ಸಂಬಂಧಿಕರು ಸೇರಿಕೊಂಡು ಯುವತಿಯನ್ನು ವಿದ್ಯುತ್ ಶಾಕ್ ಕೊಟ್ಟು ಕೊಂದು ಹಾಕಿದ ಮರ್ಯಾದಾ ಹತ್ಯೆಯ ಭೀಭತ್ಸ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
17ರ ಹರೆಯದ ಸೈಮಾ ಬೀಬಿಯೇ ಈ ರೀತಿಯಾಗಿ ಪ್ರಾಣ ಕಳೆದುಕೊಂಡ ಹುಡುಗಿ. ಬೀಬಿಯಿಂದಾಗಿ ಕುಟುಂಬಕ್ಕೆ ಅಪಮಾನವಾಗಿದೆ ಎಂದು ಗ್ರಾಮದಲ್ಲಿ ನಡೆಸಲಾದ ಸಭೆಯಲ್ಲಿ ಒಪ್ಪಿಕೊಂಡ ಆಕೆಯ ಹೆತ್ತವರು ಮತ್ತು ಕುಟುಂಬದವರು, ಶಿಕ್ಷೆ ನೀಡಲು ನಿರ್ಧರಿಸಿದ್ದರು. ಬಳಿಕ ಆಕೆಯನ್ನು ಅವರೆಲ್ಲ ಸೇರಿ ಕೊಂದು ಹಾಕಿದ್ದಾರೆ.
'ಹುಡುಗಿಯ ಕತ್ತು, ಬೆನ್ನು ಮತ್ತು ಕೈಗಳಲ್ಲಿ ಸುಟ್ಟ ಗಾಯಗಳಾಗಿರುವುದು ಕಂಡು ಬಂದಿದೆ. ಚಿತ್ರಹಿಂಸೆ ನೀಡಿ ಕೊಂದು ಹಾಕಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಹುಶಃ ವಿದ್ಯುತ್ ಆಘಾತ ನೀಡಿರಬಹುದು' ಎಂದು ಪಾಕಿಸ್ತಾನದ ಬಹವಾಲ್ಪುರ ಜಿಲ್ಲೆಯ ಪೊಲೀಸ್ ಅಧಿಕಾರಿ ಜಹೂರ್ ರಬ್ಬಾನಿ ಹೇಳಿಕೆ ನೀಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ, ಪಂಚಾಯತ್ ಆದೇಶದಂತೆ ಹುಡುಗಿಯನ್ನು ವಿದ್ಯುತ್ ಆಘಾತಕ್ಕೊಳಪಡಿಸಿ ಕೊಂದು ಹಾಕಿರುವುದು ದುಃಖಕರ ವಿಚಾರ ಎಂದಿದ್ದಾರೆ. ಅಲ್ಲದೆ, ಈ ಕುರಿತು ತಕ್ಷಣವೇ ಪೊಲೀಸರು ವರದಿ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಪಾಕಿಸ್ತಾನದ ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ಬುಡಕಟ್ಟು ಜನರಲ್ಲಿನ ನೂರಾರು ವರ್ಷಗಳ ಹಿಂದಿನ ಸಂಪ್ರದಾಯದ ಪ್ರಕಾರ, ಮನೆಯ ಹಿರಿಯರ ಒಪ್ಪಿಗೆಯಿಲ್ಲದೆ ಹುಡುಗಿಯೊಬ್ಬಳು ಬೇರೆ ಯುವಕನನ್ನು ಮದುವೆಯಾದರೆ ಇಲ್ಲವೆ ಲೈಂಗಿಕ ಚಟುವಟಿಕೆ ನಡೆಸಿದರೆ ಆಕೆಯನ್ನು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಕೊಂದು ಹಾಕುತ್ತಿರುವುದು ಮಾಮೂಲಿ ಎಂದು ವರದಿಗಳು ಹೇಳಿವೆ.