ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 23 ದಿನದಲ್ಲಿ 52 ಮಂದಿಯನ್ನು ಗಲ್ಲಿಗೆ ಹಾಕಿದ ಇರಾನ್! (Iran | serial killer | rapist | Tehran)
Bookmark and Share Feedback Print
 
ಮಹಿಳೆಯರ ಸರಣಿ ಹಂತಕ, ಮೂವರು ಅತ್ಯಾಚಾರಿಗಳು ಮತ್ತು ಇಬ್ಬರು ರಾಜಕೀಯ ಕಾರ್ಯಕರ್ತರು ಸೇರಿದಂತೆ ಹಲವರನ್ನು ಇರಾನ್ ಸೋಮವಾರ ಮರಣ ದಂಡನೆಗೆ ಒಳಪಡಿಸುವುದರೊಂದಿಗೆ, ಈ ವರ್ಷ ಇದುವರೆಗೆ ನೇಣುಗಂಬಕ್ಕೇರಿದವರ ಸಂಖ್ಯೆ 52ಕ್ಕೇರಿದೆ.

ಒಮಿಡ್ ಬರಾಕ್ ಎಂಬ 24ರ ಯುವಕನನ್ನು ಕರಾಜ್ ಸ್ಕ್ವೇರ್ ಎಂಬಲ್ಲಿ ಸಾರ್ವಜನಿಕವಾಗಿ ಗಲ್ಲಿಗೆ ಹಾಕಲಾಗಿದೆ. ಆತ 10ಕ್ಕೂ ಹೆಚ್ಚು ಮಹಿಳೆಯರ ಹತ್ಯೆ, ಅತ್ಯಾಚಾರ ಮತ್ತು ದರೋಡೆ ಪ್ರಕರಣಗಳಲ್ಲಿ ತಪ್ಪಿತಸ್ಥನಾಗಿದ್ದ ಎಂದು ವರದಿಗಳು ಹೇಳಿವೆ.

ಗವಾಮ್ ಅಟಾಕೇಶ್‌ದೆಹ್, ಮೊಸ್ತಾಫಾ ಕರೀಮಿ ಕನೇಗಾ ಮತ್ತು ರೇಜಾ ದೇಗಮ್ ಎಂಬ ಇತರ ಮೂವರನ್ನು ಟೆಹ್ರಾನ್‌ನ ಇವಿನ್ ಕಾರಾಗೃಹದಲ್ಲಿ ನೇಣುಗಂಬಕ್ಕೆ ಏರಿಸಲಾಗಿದೆ. 2007ರಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಅತ್ಯಾಚಾರಗೈದ ಆರೋಪವನ್ನು ಇವರು ಎದುರಿಸುತ್ತಿದ್ದರು.

ಜಾಫರ್ ಕಜೇಮಿ ಮತ್ತು ಮೊಹಮ್ಮದ್ ಆಲಿ ಹಜಗೇವಿ ಎಂಬವರನ್ನು ಕೂಡ ಗಲ್ಲಿಗೆ ಹಾಕಲಾಗಿದೆ. ಇಸ್ಲಾಮಿಕ್ ಆಡಳಿತದಲ್ಲಿ ನಿಷೇಧಕ್ಕೊಳಗಾಗಿರುವ ಪ್ರತಿಪಕ್ಷ 'ಪ್ಯೂಪಲ್ಸ್ ಮುಜಾಹಿದೀನ್ ಆಫ್ ಇರಾನ್' ಜತೆ ಸಂಬಂಧ ಹೊಂದಿದ್ದ ಮತ್ತು ಹಿಂಸಾಚಾರ ನಡೆಸುತ್ತಿದ್ದ ಆರೋಪಗಳ ಮೇಲೆ ಈ ಇಬ್ಬರನ್ನು ಟೆಹ್ರಾನ್‌ನಲ್ಲಿ ಗಲ್ಲಿಗೇರಿಸಲಾಗಿದೆ.

ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಅವರನ್ನು ಮರು ಆಯ್ಕೆಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಮರಣದಂಡನೆಗೆ ಗುರಿಪಡಿಸುವುದು ಬಯಲಾಗಿರುವ ಮೊದಲ ಪ್ರಕರಣ ಇದು ಎಂದು ಹೇಳಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಈ ವರ್ಷ ಇರಾನ್‌ನಲ್ಲಿ ಗಲ್ಲಿಗೇರಲ್ಪಟ್ಟವರ ಒಟ್ಟು ಸಂಖ್ಯೆ 52. ಅಂದರೆ ಪ್ರತಿದಿನ ಸರಾಸರಿ ಇಬ್ಬರಿಗಿಂತ ಹೆಚ್ಚು ಮಂದಿಯನ್ನು ಮರಣ ದಂಡನೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಇವರಲ್ಲಿ ಬಹುತೇಕ ಮಂದಿ ಮಾದಕ ದ್ರವ್ಯ ಕಳ್ಳ ಸಾಗಣೆದಾರರು ಎಂದು ಹೇಳಲಾಗಿದೆ.

2010ರಲ್ಲಿ ಇರಾನ್ ಒಟ್ಟು 179 ಮಂದಿಯನ್ನು ನೇಣುಗಂಬಕ್ಕೇರಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ