ರಷ್ಯಾ ಪ್ರಧಾನ ಮಂತ್ರಿ ವ್ಲಾದಿಮಿರ್ ಪುಟಿನ್ ಅವರ ಮಗುವಿಗೆ ನಾನು ತಾಯಿಯಾಗಿಲ್ಲ. ವಾಸ್ತವದಲ್ಲಿ ಆ ಮಗು ನನ್ನ ಸಹೋದರಿಯದ್ದು ಎಂದು ಮಾಜಿ ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಪಟು ಅಲಿನಾ ಕಬೇವಾ ಸ್ಪಷ್ಟನೆ ನೀಡಿದ್ದಾರೆ.
ನನ್ನ ಮುದ್ದಿನ ಸೋದರಳಿಯ ಅರ್ಸೆನಿಯೋ ಮಾಸ್ಕೋದಲ್ಲಿನ ನಮ್ಮ ಕುಟುಂಬವನ್ನು ಸೇರಿಕೊಂಡಿದ್ದಾನೆ. ಪ್ರತಿಯೊಬ್ಬರೂ ಆ ಮಗು ನನ್ನದೆಂದು ಭಾವಿಸಿದ್ದಾರೆ ಎಂದು ನಗುತ್ತಾ ಪ್ರತಿಕ್ರಿಯೆ ನೀಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಪುಟಿನ್ ಅವರನ್ನು ಉಲ್ಲೇಖಿಸದೆ ತನ್ನ ಪ್ರಿಯಕರನನ್ನು ಅಪಾದಮಸ್ತಕ ಹೊಗಳಲು ಈ ಸಂದರ್ಭದಲ್ಲಿ 27ರ ಹರೆಯದ ಉಜ್ಬೇಕಿಸ್ತಾನ್ ಸಂಜಾತೆ ಸುಂದರಿ ಮರೆಯಲಿಲ್ಲ.
ಪ್ರಬಲ ಮಹಿಳೆಯರಿಗೆ ಹೆದರುವ ಪುರುಷರು ನಮ್ಮಲ್ಲಿದ್ದಾರೆ. ಆದರೆ ನನ್ನವರು ನನಗಿಂತ ಹೆಚ್ಚು ಪ್ರಬಲ ಮತ್ತು ಹೆಚ್ಚಿನ ಅಧಿಕಾರ ಹೊಂದಿದ್ದಾರೆ ಎಂದು ರಷ್ಯಾದ ವೋಗ್ ನಿಯತಕಾಲಿಕಕ್ಕೆ ಕಬೇವಾ ಹೇಳಿದ್ದಾರೆ.
ಪುಟಿನ್ ಮತ್ತು ಕಬೇವಾ ನಡುವೆ ಸಂಬಂಧವಿದೆ ಎಂದು ಮೊದಲು ವರದಿಯಾದದ್ದು 2008ರಲ್ಲಿ. ಆದರೆ ಇದನ್ನು ಸ್ವತಃ ಪುಟಿನ್ ನಿರಾಕರಿಸಿದ್ದರು. ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದು ಅವರು ಹೇಳಿದ್ದರು. ಕೆಲವೇ ಸಮಯಗಳಲ್ಲಿ ಅದನ್ನು ವರದಿ ಮಾಡಿದ್ದ ಪತ್ರಿಕೆಯೂ ಮುಚ್ಚಿ ಹೋಯಿತು.
ಅದೇ ವರ್ಷ ಕಬೇವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೂ ಆ ಮಗು ಪುಟಿನ್ ಅವರದ್ದು ಎಂದು ಬಹಿರಂಗವಾಗದಂತೆ ನೋಡಿಕೊಂಡು ಬರಲಾಗಿದೆ. ಇದರ ನಡುವೆಯೂ ಮಾಧ್ಯಮಗಳಲ್ಲಿ ಇದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ತೇಪೆ ಹಚ್ಚುವ ಕ್ರಮವಾಗಿ, ಈ ರೀತಿಯ ಸುದ್ದಿಗಳನ್ನು ಮತ್ತೆ ಹಬ್ಬಿಸಲಾಗಿದೆ ಎಂದು ಹೇಳಲಾಗುತ್ತಿದೆ.