ರಷ್ಯಾ ರಾಜಧಾನಿಗೆ ಸಮೀಪದ ಡೊಮೋಡೇಡೊವೊ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 33ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ತನಿಖಾ ಸಂಸ್ಥೆ ತಿಳಿಸಿದೆ.
ಇದು ಆತ್ಮಹತ್ಯಾ ಬಾಂಬರ್‌ಗಳ ಕೃತ್ಯವಾಗಿದ್ದು, ಮತ್ತೊಂದು ಭಯೋತ್ಪಾದನಾ ಕೃತ್ಯಕ್ಕೆ ವಿಶ್ವವು ಸಾಕ್ಷಿಯಾಗಿದೆ. ರಷ್ಯಾದ ಅತ್ಯಂತ ಜನಸಂದಣಿಯ ಮತ್ತು ಜನಪ್ರಿಯ ವಿಮಾನ ನಿಲ್ದಾಣಗಳಲ್ಲೊಂದು ಇದಾಗಿದ್ದು, ಸಾವಿನ ಸಂಖ್ಯೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಮಾಸ್ಕೋದ ಅಂತಾರಾಷ್ಟ್ರೀಯ ಆಗಮನ ಹಾಲ್ ಬಳಿ ಈ ಸ್ಫೋಟ ಸಂಭವಿಸಿದ್ದು, ಮೃತಪಟ್ಟವರಲ್ಲಿ ವಿಭಿನ್ನ ರಾಷ್ಟ್ರಗಳ ಪ್ರಜೆಗಳು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಮಾಸ್ಕೋದಲ್ಲಿ ಟೆರರ್ ಅಲರ್ಟ್ ಘೋಷಿಸಲಾಗಿದೆ. ಮಾಸ್ಕೋ ಸ್ಥಳೀಯ ಸಮಯ ಸಂಜೆ ನಾಲ್ಕುವರೆಗೆ ಈ ಸ್ಫೋಟ ನಡೆದಿದ್ದು, ಆ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.