ವಾರದ ಹಿಂದಷ್ಟೇ ಭಾರತೀಯ ಮೂಲದ ಪತ್ನಿಯನ್ನು ಜೀವಂತ ಸುಟ್ಟು ಕೊಂದು ಹಾಕಿ ತಪ್ಪಿಸಿಕೊಂಡಿರುವ ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚಲು ನ್ಯೂಜಿಲೆಂಡ್ ಪೊಲೀಸರು ಅಂತಾರಾಷ್ಟ್ರೀಯ ಪೊಲೀಸರ ಸಹಕಾರ ಕೋರಿದ್ದಾರೆ.
28ರ ಹರೆಯದ ರಂಜೀತಾ ಶರ್ಮಾ ಎಂಬಾಕೆಯೇ ಬಲಿಯಾದವಳು. ಆಕೆಯ ಆರೋಪಿ ಪತಿ ಫಿಜಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಮ್ಮ ನಾಲ್ಕರ ಹರೆಯದ ಪುತ್ರನೊಂದಿಗೆ ಈ ದಂಪತಿ ಫಿಜಿಯಿಂದ ಶುಕ್ರವಾರವಷ್ಟೇ ನ್ಯೂಜಿಲೆಂಡಿಗೆ ಬಂದಿದ್ದರು. ಅದರ ಮರುದಿನ ಅಂದರೆ ಶನಿವಾರ ಹಂಟ್ಲಿ ಎಂಬಲ್ಲಿನ ನಿರ್ಜನ ರಸ್ತೆಯ ಬದಿಯಲ್ಲಿ ಸುಟ್ಟು ಕರಕಲಾದ ಆತನ ಪತ್ನಿಯ ಕಳೇಬರ ಪತ್ತೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಆರೋಪಿಯ ಹೆಸರು ಇನ್ನಷ್ಟೇ ತಿಳಿದು ಬರಬೇಕಿದೆ. ಆತ ಮಹತ್ವದ ವ್ಯಕ್ತಿಯೆಂಬುದು ಖಚಿತ. ಆತನನ್ನು ಪತ್ತೆ ಹಚ್ಚಿ, ನಾವು ಮಾತನಾಡಲು ಯತ್ನಿಸುತ್ತಿದ್ದೇವೆ. ಅಲ್ಲದೆ, ದಂಪತಿಯ ಪುತ್ರನನ್ನು ನೋಡಕೊಳ್ಳುವ, ಆತನ ಸುರಕ್ಷತೆಯನ್ನು ವಹಿಸಿಕೊಳ್ಳುವ ಕುರಿತು ಕೂಡ ಚಿಂತಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ವಿದೇಶಗಳ ಕಚೇರಿಗಳ ಜತೆ ಮಾತುಕತೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಾವು ಇಂಟರ್ ಪೋಲ್ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೆಲವೇ ದಿನಗಳಲ್ಲಿ ಸರ್ಚ್ ವಾರೆಂಟ್‌ಗಳನ್ನು ಹೊರಡಿಸಲಿದ್ದೇವೆ. ಅವರು ಬಳಸಿರುವ ವಾಹನವೊಂದನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ವರದಕ್ಷಿಣೆ ಸಂಬಂಧ ಕೊಲೆ ಅಥವಾ ಮರ್ಯಾದಾ ಹತ್ಯೆಯೇ ಎಂಬುದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ.