ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಮೂಲದ ಅಮೆರಿಕಾ ಪ್ರಜೆಗೆ 32 ವರ್ಷ ಜೈಲು (Indian-American | military secrets | China | Noshir Gowadia)
Bookmark and Share Feedback Print
 
ಭಾರತ ಸಂಜಾತ ಅಮೆರಿಕಾ ಪ್ರಜೆ, 'ಬಿ-2 ರಹಸ್ಯ ಬಾಂಬರ್ ವಿಮಾನ'ದ ಮಾಜಿ ಇಂಜಿನಿಯರ್ ಮಿಲಿಟರಿ ರಹಸ್ಯಗಳನ್ನು ಚೀನಾಕ್ಕೆ ಮಾರಾಟ
ಮಾಡಲು ಹೋಗಿ 32 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ನಾಸಿರ್ ಗೊವಾಡಿಯಾ ಎಂಬಾತನೇ ಈ ವ್ಯಕ್ತಿ. 66ರ ಹರೆಯದವನಾಗಿರುವ ಈತ ಈಗಾಗಲೇ ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾನೆ.

'ಆತನಿಗೆ ಜೀವಾವಧಿ ಶಿಕ್ಷೆ ನೀಡದೇ ಇರುವುದು ನಮಗೆ ಕೊಂಚ ನಿರಾಸೆಯಾಗಿದೆ. ಹಾಗೆ ಮಾಡುತ್ತಿದ್ದರೆ ಒಂದು ಅತ್ಯುತ್ತಮ ಸಂದೇಶವನ್ನು ರವಾನಿಸಿದಂತೆ ಆಗುತ್ತಿತ್ತು. ಆದರೂ 32 ವರ್ಷಗಳ ಜೈಲು ಶಿಕ್ಷೆಯೆಂದರೆ ಸಾಧಾರಣವಲ್ಲ. ಭಿನ್ನ ದೃಷ್ಟಿಕೋನಗಳಿಂದ ನೋಡಿದಾಗ, ಇದು ಆತನಿಗೆ ಸೂಕ್ತವಾಗಿದೆ' ಎಂದು ಅಮೆರಿಕಾದ ಸಹಾಯಕ ವಕೀಲ ಕೆನ್ ಸೊರೆನ್ಸನ್ ಪ್ರತಿಕ್ರಿಯಿಸಿದ್ದಾರೆ.

ಚೀನಾವು ತನ್ನ ನೂತನ ಜಿ-20 ರಹಸ್ಯ ಫೈಟರ್ ವಿಮಾನದ ಹಾರಾಟ ಪರೀಕ್ಷೆ ನಡೆಸಿದ ಒಂದು ವಾರದ ನಂತರ ಮುಂಬೈ ಸಂಜಾತ ನಾಸಿರ್‌ಗೆ ಅಮೆರಿಕಾ ಶಿಕ್ಷೆ ಪ್ರಕಟಿಸಿದೆ. ಮುಖ್ಯ ಜಿಲ್ಲಾ ನ್ಯಾಯಾಧೀಶೆ ಸೂಸಾನ್ ಓಕಿ ಮೊಲ್ಲಾವೇ ಅವರು ಶಿಕ್ಷೆಯನ್ನು ಪ್ರಕಟಿಸಿದಾಗ ಆತನಲ್ಲಿ ಯಾವುದೇ ಭಾವನಾತ್ಮಕತೆ ಕಂಡು ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

1968ರಿಂದ 1986ರವರೆಗೆ ನೊರ್ತ್‌ರಪ್‌ನಲ್ಲಿ ಇಂಜಿನಿಯರ್ ಕೆಲಸ ಮಾಡಿದ್ದ ನಾಸಿರ್, ಈ ಸಂದರ್ಭದಲ್ಲಿ ಬಿ-2 ಬಾಂಬರ್ ನಿರ್ಮಾಣದಲ್ಲಿ ಸಹಾಯ ಮಾಡಿದ್ದ. ಹುದ್ದೆಯಿಂದ ನಿವೃತ್ತಿಯಾದ ಬಳಿಕವೂ ಆತ ಅಮೆರಿಕಾ ಮಿಲಿಟರಿ ಜತೆಗೆ ಖಾಸಗಿ ಗುತ್ತಿಗೆದಾರ ಸಂಬಂಧವನ್ನು ಉಳಿಸಿಕೊಂಡಿದ್ದ.

ಆದರೆ ಕೆಲ ವರ್ಷಗಳಲ್ಲಿ ಆತ ಮಿಲಿಟರಿ ಜತೆ ಮುನಿಸಿಕೊಂಡು, ಹಲವು ರಹಸ್ಯ ದಾಖಲೆಗಳನ್ನು ಚೀನಾಕ್ಕೆ ಮಾರಾಟ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಇದನ್ನೇ ಬಳಸಿಕೊಂಡಿರುವ ಚೀನಾ, ಇದೀಗ ರಹಸ್ಯ ಬಾಂಬರ್ ವಿಮಾನವನ್ನು ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ