35 ಜನರ ಸಾವಿಗೆ ಕಾರಣವಾದ ಮತ್ತು 178 ಜನ ತೀವ್ರ ಗಾಯಗೊಂಡಿದ್ದ ರಷ್ಯಾದ ಜನನಿಬಿಡ ಡೊಮೋಡೇಡೊವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಹತ್ಯಾ ದಾಳಿಯ ಹಿಂದೆ ಶಂಕಿತ 'ಕಪ್ಪು ವಿಧವೆ' ಇರುವುದಾಗಿ ಮಂಗಳವಾರ ವರದಿಗಳು ತಿಳಿಸಿದೆ.
ಕಪ್ಪು ಬಟ್ಟೆ ಧರಿಸಿದ್ದ ಮಹಿಳೆಯೊಬ್ಬಳ ಕೈಚೀಲವು ಸ್ಫೋಟಗೊಂಡಿದನ್ನು ಕಣ್ಣಾರೆ ಕಂಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ಇಂಟರ್‌ಫ್ಯಾಕ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಕಪ್ಪುಬಟ್ಟೆ ಧರಿಸಿ ನಿಂತಿದ್ದ ಮಹಿಳೆಯ ಪಕ್ಕದಲ್ಲೇ ಸಿಡಿಮದ್ದುಗಳನ್ನು ಹೊಂದಿದ್ದ ಬ್ಯಾಗ್ ಅಥವಾ ಸೂಟ್‌ಕೇಸ್ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿದೆ.
ಭಯೋತ್ಪಾದಕರ ದಾಳಿಯ ಬಗ್ಗೆ ಭದ್ರತಾ ಇಲಾಖೆಗೆ ಮೊದಲೇ ಮಾಹಿತಿಯಿತ್ತು. ಪ್ರಸ್ತುತ ಕಾಕಸಸ್‌ನಲ್ಲಿ ಹತರಾಗಿರುವ ಉಗ್ರಗಾಮಿಗಳ 'ವಿಧವೆ'ಯರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಉಗ್ರಗಾಮಿಗಳು ಮಾರ್ಚ್ 2010ರಲ್ಲಿ ನಡೆದ ಮಾಸ್ಕೋ ಮೆಟ್ರೊ ಸ್ಟೇಷನ್ ಅವಳಿ ಸ್ಫೋಟ ಸೇರಿದಂತೆ ಈ ಹಿಂದೆ ನಡೆದ ಹಲವಾರು ಆತ್ಮಹತ್ಯಾ ದಾಳಿಗಳಲ್ಲಿ ಭಾಗಿಯಾಗಿದ್ದರು.
ಡೊಮೋಡೇಡೊವೊ ದಾಳಿಯು ಪುರುಷನಿಂದ ನಡೆದಿದೆ ಎಂದು ಭದ್ರತಾ ಪಡೆಯವರ ತನಿಖೆಯ ದಾರಿ ತಪ್ಪಿಸಲಾಗಿದೆ ಎಂಬ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ವರದಿ ಮಾಡಿದೆ.