ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಅವರ ರಾಜತಾಂತ್ರಿಕ ವಿನಾಯಿತಿಗೆ ಸಂಬಂಧಿಸಿ, ಭಾರತ ಸರಕಾರದ ಮನವಿಯ ಮೇರೆಗೆ ಇನ್ನೂ ಪುನರ್‌ಪರಿಶೀಲನೆ ನಡೆಸುತ್ತಿರುವುದಾಗಿ ಅಮೆರಿಕ ತಿಳಿಸಿದೆ.
ಸಚಿವ ಕಮಲ್‌ನಾಥ್ ಅವರ ಮೇಲೆ ದಾಖಲಾಗಿರುವ ಸಿವಿಲ್ ಆರೋಪ ಪ್ರಕರಣವನ್ನು ನಾವಿನ್ನೂ ಪರಿಶೀಲಿಸುತ್ತಿದ್ದೇವೆ. ಇದು ನ್ಯಾಯಾಂಗದಲ್ಲಿರುವುದರಿಂದ ಅವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಪಿ.ಜೆ. ಕ್ರೊವ್ಲಿ ತಿಳಿಸಿದ್ದಾರೆ.
ಪ್ರತಿವಾದಿಗೆ ಫೆಬ್ರವರಿ ಒಂಬತ್ತರವರೆಗೆ ದೂರು ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಕಮಲ್‌ನಾಥ್ ಅವರ ವಿನಾಯಿತಿ ವಿಷಯವು ನಮ್ಮ ವಿದೇಶಾಂಗ ಇಲಾಖೆಯಲ್ಲಿದೆ. ಈ ಹಂತದಲ್ಲಿ ನಾವು ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಕ್ರೊವ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿಕ್ಸ್ ಫಾರ್ ಜಸ್ಟೀಸ್ ಎಂಬ ಸ್ವಯಂ ಸೇವಾ ಸಂಸ್ಥೆ ಕಮಲ್‌ನಾಥ್ ಅವರ ಮೇಲೆ ಕೇಸು ದಾಖಲಿಸಿತ್ತು. ಈ ಸಂಬಂಧ ಭಾರತ ರಾಯಭಾರ ಕಚೇರಿಯು ಅಮೆರಿಕದಿಂದ ವಿವರಣೆ ಕೇಳಿತ್ತು.