ಕಳೆದ ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ 17ರ ಹರೆಯದ ಬಾಲಕಿ ಲಿಂಗ ಪರಿವರ್ತನೆ ಆಪರೇಷನ್ ನಡೆಸುವ ಮೂಲಕ ಗಂಡಾಗಿ ಪರಿವರ್ತನೆಯಾಗಿರುವ ಅಪರೂಪದ ಘಟನೆಯೊಂದು ವರದಿಯಾಗಿದೆ.
ಲಿಂಗ ಪರಿವರ್ತನೆ ನಂತರ ಆಕೆ(ತ) ಆರೋಗ್ಯದಿಂದ ಇದ್ದು, ತಾನು ಮೊದಲು ಹೆಣ್ಣಾಗಿದ್ದೇನೋ ಅಥವಾ ಗಂಡೋ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಒಟ್ಟಾರೆ ನಾನು ಜೀವಂತವಾಗಿದ್ದೇನೆ ಎಂದು ಬಾಲಕಿ(ಕ) ತಿಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ನಗರದ ನಿವಾಸಿಯಾಗಿದ್ದ ಫರ್ಜಾನಾ ಎಂಬಾಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಳು. ನಂತರ ಆಕೆಯನ್ನು ಲಾಹೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಸುಮಾರು ಒಂದು ವರ್ಷಗಳ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದಳು ಎಂದು ವೈದ್ಯ ರೆಹಾನ್ ತಿಳಿಸಿರುವುದಾಗಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ವರದಿ ಮಾಡಿದೆ.
'ಆಕೆಯ ಜೀನ್ ಸ್ಥಿತಿ ತುಂಬಾ ಅಪರೂಪವಾದದ್ದು ಎಂದು ಆಕೆಯ ಪೋಷಕರಿಗೆ ತಿಳಿಸಿ, ಆಕೆ ಹಾರ್ಮೋನ್ ಅಸಮತೋಲನದಿಂದ ತೀವ್ರವಾಗಿ ಬಳಲುತ್ತಿರುವುದಾಗಿಯೂ ವಿವರಿಸಿರುವುದಾಗಿ' ಹೇಳಿದರು. ಅಲ್ಲದೇ ಆಕೆಗೆ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕು. ಇಲ್ಲದಿದ್ದರೆ ಆಕೆಯ ಜೀವಕ್ಕೆ ಅಪಾಯ ಇರುವುದಾಗಿ ತಿಳಿಸಿದ್ದರು.
'ಒಂದೋ ನೀವು ನಿಮ್ಮ ಮಗಳ ಸಾವನ್ನು ನೋಡಬೇಕು, ಇಲ್ಲವೇ ನಂತರ ಆಕೆಯನ್ನು ಹುಡುಗನನ್ನಾಗಿ ನೋಡಬೇಕು' ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ವೈದ್ಯರು ಸೂಚಿಸಿದ್ದರು. ಹಾಗಾಗಿ ನಮಗೆ ಬೇರೆ ದಾರಿ ಇರಲಿಲ್ಲವಾಗಿತ್ತು. ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಲು ಹೇಳಿದ್ದೇವು. ಅದರಂತೆ ವೈದ್ಯರು ಮಗಳಿಗೆ (ಲಿಂಗ ಪರಿವರ್ತನೆ) ಶಸ್ತ್ರಚಿಕಿತ್ಸೆ ನಡೆಸಿ ಹುಡುಗನನ್ನಾಗಿ ಮಾಡುವ ಮೂಲಕ ಜೀವ ಉಳಿಸಿದರು ಎಂದು ಫರ್ಜಾನಾ ತಂದೆ ಇಶ್ತಿಯಾಕ್ ವಿವರಿಸಿದ್ದಾರೆ.
ಭಾನುವಾರ ರಾತ್ರಿ ಫರ್ಜಾನಾಗೆ ಲಿಂಗ ಪರಿವರ್ತನೆ ಆಪರೇಶನ್ ಮಾಡಿದ್ದರು. ಬಳಿಕ ಪೋಷಕರು ಆಕೆಯ ಹೆಸರನ್ನು ಫೈಜಾನ್ ಎಂದು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ. ಅಂತೂ ತಾನು ಜೀವಂತವಾಗಿ ಉಳಿದಿರುವುದಕ್ಕೆ ಸಂತಸವಾಗಿದೆ ಎಂದು ಫೈಜಾನ್ ತಿಳಿಸಿರುವುದಾಗಿ ವರದಿ ತಿಳಿಸಿದೆ.
ನನ್ನ ಬದುಕು ಸಂಪೂರ್ಣವಾಗಿ ಬದಲಾದಂತಾಗಿದೆ. ಆದರೆ ನನ್ನ ಮೊದಲಿನ ಸ್ನೇಹಿತೆ(ತ)ಯರ ಜತೆಗಿನ ಗೆಳೆತನ ಮುಂದುವರಿಸುತ್ತೇನೆ. ಯಾಕೆಂದರೆ ಜನರು ನಾನು ಈಗ ಏನಾಗಿದ್ದೇನೆ ಎಂಬ ಬಗ್ಗೆ ಲಕ್ಷ್ಯ ಕೊಡಲ್ಲ. ಮೊದಲು ನಾನು ಹೆಣ್ಣಾಗಿದ್ದೆ, ಈಗ ಗಂಡಾಗಿದ್ದೇನೆ. ಹಾಗಂತ ನನ್ನ ಸ್ನೇಹಿತೆಯರನ್ನು ದೂರ ಮಾಡಲು ಸಾಧ್ಯವಿಲ್ಲ ಎಂಬುದು ಫೈಜಾನ್ ನುಡಿ.