ರಿಯೋ ಡೆ ಜನೇರಿಯೋ, ಶನಿವಾರ, 29 ಜನವರಿ 2011( 09:12 IST )
ತನ್ನ ಪತ್ನಿಯನ್ನೇ ಸುಮಾರು 16 ವರ್ಷಗಳ ಕಾಲ ನೆಲಮಾಳಿಗೆಯಲ್ಲಿ ಕೂಡಿ ಹಾಕಿ, ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆ ಜತೆ ಸಂಸಾರ ನಡೆಸುತ್ತಿದ್ದ ಬ್ರೆಜಿಲ್‌ನ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿರುವ ಅಪರೂಪದ ಘಟನೆಯೊಂದು ವರದಿಯಾಗಿದೆ.
ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸಾವೋ ಪೌಲೋ ರಾಜ್ಯದ ಸೊರೊಕಾಬಾ ನಗರದಲ್ಲಿನ ಮನೆಯಲ್ಲಿ ತಪಾಸಣೆ ನಡೆಸಿದಾಗ ಮನೆಯ ನೆಲಮಾಳಿಗೆಯಲ್ಲಿ ಸೆಬಾಸ್ಟಿಯಾನಾ ಅಪ್ರೆಸಿಡಾ ಗ್ರೊಪ್ಪೋ(64) ಎಂಬಾಕೆ ಪತ್ತೆಯಾಗಿದ್ದಳು.
ನೆಲಮಾಳಿಗೆ ಸುಮಾರು 130 ಅಡಿ ಉದ್ದವಿದ್ದು, ಮಲ-ಮೂತ್ರ ಹಾಗೂ ಸತ್ತು ಬಿದ್ದ ಜಿರಳೆಗಳ ರಾಶಿಯಿಂದ ಕೋಣೆ ತುಂಬಿ ಹೋಗಿರುವುದಾಗಿ ಸೊರಾಕಾಬಾ ಪೊಲೀಸ್ ಇನ್ಸ್‌ಪೆಕ್ಟರ್ ಅನಾ ಲುಜಾ ಸಾಲೋಮೊನೆ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ನೆಲಮಾಳಿಗೆಯಲ್ಲಿ ಸೆಬಾಸ್ಟಿಯಾನಾ ನಗ್ನಳಾಗಿ ಇದ್ದಿದ್ದು, ನಂತರ ಆಕೆಗೆ ಬ್ಲಾಂಕೆಟ್ ನೀಡಿ ಹೊರ ತರಲಾಯಿತು ಎಂದು ಲುಜಾ ವಿವರಿಸಿದ್ದಾರೆ.
ಪತ್ನಿಯನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದ್ದ ಪತಿ ಜೋಆವೋ ಬಾಟಿಸ್ಟಾ ಗ್ರೊಪ್ಪೋ ಹಾಗೂ ಆತನ ಜತೆ ಸಂಸಾರ ಹೂಡಿದ ಮಹಿಳೆಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನ್ನ ಹೆಂಡತಿ ಮಾನಸಿಕ ಅಸ್ವಸ್ಥೆ ಹಾಗೂ ಜಗಳಗಂಟಿಯಾಗಿದ್ದರಿಂದ ತಾನು ಆಕೆಯನ್ನು ಹಲವಾರು ವರ್ಷಗಳಿಂದ ಕೂಡಿ ಹಾಕಿರುವುದಾಗಿ ಪತಿ ಮಹಾಶಯ ಪೊಲೀಸರಿಗೆ ತಿಳಿಸಿದ್ದಾನೆ.
ಗ್ರೊಪ್ಪೋ ತನ್ನ ಪತ್ನಿಯನ್ನು ಸುಮಾರು 16 ವರ್ಷಕ್ಕಿಂತಲೂ ಹೆಚ್ಚು ಕಾಲ ಬಂಧನದಲ್ಲಿಟ್ಟಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಗ್ರೊಪ್ಪೋ ಹಾಗೂ ಆತನ ಜತೆ ವಾಸಿಸುತ್ತಿದ್ದ ಮಹಿಳೆಗೆ ಎಂಟು ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆ ಇರುವುದಾಗಿ ಪೊಲೀಸ್ ಅಧಿಕಾರಿ ಲುಜಾ ತಿಳಿಸಿದ್ದಾರೆ.