ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್! (Indian students | radio-tagged | US | Tri-Valley University | India)
PR
ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗರ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದ ಅಮೆರಿಕ ಇದೀಗ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ 'ರೇಡಿಯೋ ಕಾಲರ್' ತೊಡಿಸಿ ಪ್ರಾಣಿಗಳಂತೆ ನಡೆಸಿಕೊಂಡಿರುವ ಅಮಾನವೀಯ ಘಟನೆ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

ವೀಸಾ ಹಾಗೂ ವಲಸೆ ದಾಖಲೆಗಳ ಸಮಸ್ಯೆಯಿಂದಾಗಿ ಕೆಲವು ವಿವಿಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆಗೆದುಹಾಕಲಾಗಿದೆ. ಕ್ಯಾಲಿಫೋರ್ನಿಯಾದ ಟ್ರೈವ್ಯಾಲಿ ವಿವಿಯನ್ನು ಮುಚ್ಚಲಾಗಿದ್ದು, ಇಲ್ಲಿ ವ್ಯಾಸಂಗ ನಡೆಸುತ್ತಿದ್ದ ಸುಮಾರು ಒಂದೂವರೆ ಸಾವಿರ ಭಾರತೀಯ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

ಅಷ್ಟೇ ಅಲ್ಲ ಅಮೆರಿಕ ಸರಕಾರ ಈ ವಿದ್ಯಾರ್ಥಿಗಳು ಬೇರೆಡೆಗೆ ವಲಸೆ ಹೋಗದಂತೆ ಅವರ ಕಾಲಿಗೆ ಜಿಪಿಆರ್ಎಸ್ ಇರುವ ಕಾಲರ್ ತೊಡಿಸಿ ತನ್ನ ಕ್ರೂರತನವನ್ನು ಮೆರೆದಿದೆ. ಅಮೆರಿಕದ ಈ ಅನಾಗರಿಕ ನಡವಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ವಿವಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡದಂತೆ ಒತ್ತಾಯಿಸಿದೆ.

ಅಮೆರಿಕ ಸರಕಾರ ಹಾಗೂ ವಿವಿ ನಡುವೆ ಏನು ನಡೆಯುತ್ತಿದೆ ಎಂಬ ವಿಷಯ ನಮಗೆ ಗೊತ್ತಿಲ್ಲ. ನಾವು ಅಕ್ರಮವಾಗಿ ವಲಸೆ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ಏಕಾಏಕಿ ವಿವಿ ಮುಚ್ಚಿದ ಕಾರಣ ಕೂಡ ನಮಗೆ ತಿಳಿದಿಲ್ಲ. ಸ್ಥಳೀಯ ಸೆನೆಟರ್ ಹಾಗೂ ಭಾರತೀಯ ರಾಯಭಾರಿಯ ನೆರವು ಕೋರಿದ್ದೇವೆ. ಏತನ್ಮಧ್ಯೆ ವಲಸೆ ಕಚೇರಿಯ ಅಧಿಕಾರಿಗಳು ದಿಢೀರನೆ ಬಂದು ನಮ್ಮ ಕಾಲಿಗೆ ರೇಡಿಯೋ ಕಾಲರ್ ಅಳವಡಿಸಿ ಹೋಗಿದ್ದಾರೆ. ಇದರಿಂದ ತುಂಬಾ ಅವಮಾನಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಭಾರತೀಯ ರಾಯಭಾರಿ ಸಿಬ್ಬಂದಿ ನ್ಯೂಯಾರ್ಕ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೋ ದೂತವಾಸದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬೇರೆ ವಿವಿಗೆ ವರ್ಗಾವಣೆ ಪಡೆಯಲು ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವೇ ಗೌರವಯುತವಾಗಿ ಸ್ವದೇಶಕ್ಕೆ ವಾಪಸಾಗಲು ಅನುವು ಮಾಡಿಕೊಡಬೇಕೆಂದು ಭಾರತ ಮನವಿ ಮಾಡಿಕೊಂಡಿದೆ.

ರೇಡಿಯೋ ಕಾಲರ್ ಕೂಡ್ಲೆ ತೆಗೆಯಿರಿ:ಅಮೆರಿಕಕ್ಕೆ ಕೃಷ್ಣ
ಅಮೆರಿಕದ ಟ್ರೈವ್ಯಾಲಿ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ಬಲವಂತವಾಗಿ ರೇಡಿಯೋ ಕಾಲರ್ ತೊಡಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ವಿದ್ಯಾರ್ಥಿಗಳು ಕ್ರಿಮಿನಲ್‌ಗಳಲ್ಲ. ಹಾಗಾಗಿ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್ ಅಳವಡಿಸಿದ ಅಧಿಕಾರಿಗಳ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಅಮಾನವೀಯ ಘಟನೆ. ಭಾರತೀಯ ವಿದ್ಯಾರ್ಥಿಗಳು ಅಪರಾಧಿಗಳಲ್ಲ. ಅವರ ಕಾಲಿಗೆ ತೊಡಿಸಿದ ರೇಡಿಯೋ ಕಾಲರ್ ಕೂಡಲೇ ತೆಗೆಸಬೇಕು ಎಂದು ಅಮೆರಿಕಕ್ಕೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಸಂಬಂಧಿತ ಲೇಖನಗಳು