ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್ ದಳ್ಳುರಿ ಉದ್ವಿಗ್ನ; ಸ್ವದೇಶದತ್ತ ಭಾರತೀಯರು (Egypt crisis | Cairo | Indians | S M Krishna | Hosni Mubarak | Mohamed ElBaradei)
ಈಜಿಪ್ಟ್ ದಳ್ಳುರಿ ಉದ್ವಿಗ್ನ; ಸ್ವದೇಶದತ್ತ ಭಾರತೀಯರು
ಕೈರೋ, ಸೋಮವಾರ, 31 ಜನವರಿ 2011( 14:58 IST )
ಈಜಿಪ್ಟ್‌ನಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಹೊಸ್ನಿ ಮುಬಾರಕ್ ಆಡಳಿತವನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ಜನರು ನಡೆಸುತ್ತಿದ್ದ ಪ್ರತಿಭಟನೆ ತೀವ್ರಗೊಂಡಿದ್ದು,ಘರ್ಷಣೆ ಹಾಗೂ ಪೊಲೀಸರ ಗೋಲಿಬಾರ್‌ಗೆ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಈಜಿಪ್ಟ್‌ನಲ್ಲಿ ಇರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತ ವಿಶೇಷ ವಿಮಾನವನ್ನು ಕಳುಹಿಸಿದೆ.
ಸುಮಾರು 300 ಮಂದಿ ಭಾರತೀಯರು ಸೋಮವಾರ ಬೆಳಿಗ್ಗೆ ಕೈರೋದಿಂದ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ ಕೆಲವು ಕಾರಣಗಳಿಂದಾಗಿ ವಿಮಾನ ಭಾರತಕ್ಕೆ ತಡವಾಗಿ ಬರಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈಜಿಪ್ಟ್‌ನಲ್ಲಿ 3,600 ಹಾಗೂ ಕೈರೋದಲ್ಲಿ 2ಸಾವಿರಕ್ಕೂ ಅಧಿಕ ಭಾರತೀಯರು ವಾಸವಾಗಿದ್ದಾರೆ. ಹಿಂಸಾಚಾರ ಪೀಡಿತ ಈಜಿಪ್ಟ್‌ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭಾರತ ತಿಳಿಸಿದೆ.
ಭಾರತಕ್ಕೆ ವಾಪಸಾಗಲು ನಿರ್ಧರಿಸಿರುವ ಎಲ್ಲಾ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದಾಗಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಸರ್ವಾಧಿಕಾರ ನಡೆಸುತ್ತಿರುವ ಅಧ್ಯಕ್ಷ ಹೊಸ್ನಿ ಮುಬಾರಕ್ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ ಸಾವಿರಾರು ಪ್ರತಿಭಟನಾಕಾರರು ಕಳೆದ ವಾರದಿಂದ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ತಾಳಿದೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಏಕಾಏಕಿ ನಡೆಸಿದ ಗುಂಡಿನ ದಾಳಿಗೆ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಈಜಿಪ್ಟ್‌ನ ವಿರೋಧ ಪಕ್ಷದ ನಾಯಕ ಮೊಹಮ್ಮದ್ ಎಲ್‌ಬರಾಡೈ ಅವರು ಕೈರೋದ ಟಾಹ್ರಿರ್ ಸ್ಕ್ವೇರ್‌ಗೆ ಭಾನುವಾರ ಆಗಮಿಸಿ, ಸರ್ವಾಧಿಕಾರಿ ಹೊಸ್ನಿ ಮುಬಾರಕ್ ಕೂಡಲೇ ಅಧ್ಯಕ್ಷ ಪದವಿ ತ್ಯಜಿಸಲಿದ್ದಾರೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದರು. ಆದರೆ ಮುಬಾರಕ್ ಅಧ್ಯಕ್ಷಗಾದಿಯಿಂದ ಈವರೆಗೆ ಕೆಳಗಿಳಿಯದಿರುವುದು ಪ್ರತಿಭಟನೆ ತೀವ್ರಗೊಳ್ಳಲು ಕಾರಣವಾಗಿದೆ.
ಏತನ್ಮಧ್ಯೆ ಮುಬಾರಕ್ ಅವರು ಜನರನ್ನು ಶಾಂತಗೊಳಿಸುವುದು ಮತ್ತು ಅಧಿಕಾರದಲ್ಲೇ ಮುಂದುವರಿಯುವ ಪ್ರಯತ್ನದ ನಿಟ್ಟಿನಲ್ಲಿ ಪ್ರಸ್ತುತ ಸರಕಾರವನ್ನು ಬರ್ಕಾಸ್ತು ಮಾಡಿದ್ದಾರೆ. ಹೊಸ ಪ್ರಧಾನಿಯನ್ನಾಗಿ ಮಾಜಿ ಸಚಿವ ಅಹ್ಮದ್ ಶಫಿ ಅವರನ್ನು ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲ ಹೊಸ್ನಿ ಅವರ ಸಮರ್ಥ ಉತ್ತರಾಧಿಕಾರಿ ಎಂಬಂತೆ ವಾಯುಪಡೆ ಮಾಜಿ ಅಧಿಕಾರಿ ಶಫೀಕ್ ಅವರಿಗೆ ಪ್ರಚಾರ ನೀಡಲಾಗುತ್ತಿದೆ.
ಜನರು ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿದ್ದರೆ, ಲೂಟಿಕೋರರು ಬೆಲೆಬಾಳುವ ಸಾಮಗ್ರಿಗಳನ್ನು ಕೊಳ್ಳೆ ಹೊಡೆಯುವಲ್ಲಿ ನಿರತರಾಗಿದ್ದಾರೆ. ಈ ಕಾರ್ಯದಲ್ಲಿ ಹೆಚ್ಚಾಗಿ ಪೊಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳೇ ಹೆಚ್ಚಾಗಿ ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.